
ಕೆ.ಎಂ.ದೊಡ್ಡಿಯಲ್ಲಿ ರೌಡಿಶೀಟರ್ ಗಳಿಗೆ ಪರೇಡ್
ಭಾರತೀನಗರ: ಇಲ್ಲಿನ ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ರೌಡಿಗಳ ಪಟ್ಟಿಯಲ್ಲಿರುವ ಹಳೆಯ ಎಲ್ಲ ರೌಡಿಶೀಟರ್ ಗಳನ್ನು ಠಾಣೆಗೆ ಕರೆಯಿಸಿ ಪರೇಡ್ ನಡೆಸಿದ್ದಾರೆ.
ಈಗಾಗಲೇ ರೌಡಿ ಶೀಟರ್ ನಲ್ಲಿರುವ ಮಾಜಿ ರೌಡಿಗಳನ್ನು ಸಿಪಿಐ ಶಿವಮಲ್ಲಯ್ಯ ಅವರು ಚುನಾವಣೆ ಹಿನ್ನೆಲೆಯಲ್ಲಿ ಠಾಣೆಗೆ ಕರೆಯಿಸಿ ಪ್ರತೀ ಮೂರು ದಿನಗಳಿಗೊಮ್ಮೆ ಎಲ್ಲ ರೌಡಿ ಶೀಟರ್ ಗಳು ಪೊಲೀಸ್ ಠಾಣೆಗೆ ಬಂದು ಸಹಿ ಮಾಡಿ ಹೋಗುವಂತೆ ತಿಳಿಸಿದರು.
ಒಳ್ಳೆಯ ನಡೆತೆಯಿದ್ದಲ್ಲಿ ಅಥವಾ ಉತ್ತಮ ಮಾರ್ಗದಲ್ಲಿ ನಡೆದಲ್ಲಿ ಊರುಗಳಲ್ಲಿ ಓಡಾಡಿಕೊಂಡು ಇರಬಹುದು. ಇಲ್ಲವಾದಲ್ಲಿ ನಮಗೆ ಏನು ಮಾಡಬೇಕೆಂದು ಗೊತ್ತಿದೆ. ಆ ಮಾರ್ಗದಲ್ಲಿ ನಡೆಯದೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದರಲ್ಲದೆ, ರೌಡಿ ಶೀಟರ್ ಗಳು ಎಲ್ಲಿಯೇ ಗಲಭೆಯಾಗಲೀ ಅಲ್ಲಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡುವ ಜೊತೆಗೆ, ಅಪರಾಧ ಪ್ರಕರಣದಲ್ಲಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ.ಎಂ.ದೊಡ್ಡಿಯಲ್ಲಿ ಬಂದು ಬಾರ್ ಗಳಲ್ಲಿ ಅನಾವಶ್ಯಕವಾಗಿ ಗಲಾಟೆ ಮಾಡುವುದು ಅಥವಾ ಇನ್ನಿತರ ಯಾವುದೇ ಗಲಾಟೆಗಳಲ್ಲಿ ಪಾಲ್ಗೊಂಡಿದ್ದು ಕಂಡು ಬಂದಲ್ಲಿ ಅಂತವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಂಡು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.