ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಮಂಗಳೂರು: ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು ದಿನಾಂಕ 12/5/2022 ರಂದು ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಹಿರಿಯ ಎಲುಬು ಮತ್ತು ಕೀಲು ತಜ್ಞರಾದ ಡಾ. ಸೀತಾರಾಮ ರಾವ್‍ರವರು ಭಾಗವಹಿಸಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡ ಬಳಿಕ ಅತಿಥಿಗಳು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ತನ್ನ ಸೇವೆಯಲ್ಲಿ ದೇವರನ್ನು ಕಂಡ ಹಾಗೂ ಮಾನವ ಕುಲಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಹೂಗಳÀನ್ನು ಅರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು. ನರ್ಸಿಂಗ್ ಸಿಬ್ಬಂದಿಯವರು ಹಾಗೂ ಅತಿಥಿಗಳು ಕೇಕನ್ನು ಕತ್ತರಿಸುವುದರ ಮೂಲಕ ದಿನವನ್ನು ಸಂಭ್ರಮಿಸಲಾಯಿತು.

ಕೆಎಂಸಿ ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ರಾಮಪುರಂ ರವರು ಈ ಸಂದರ್ಭದಲ್ಲಿ ಮಾತನಾಡಿ ದಾದಿಯರು ಆಸ್ಪತ್ರೆಯ ಆಧಾರ ಸ್ಥಂಭಗಳು. ಆಸ್ಪತ್ರೆಯಲ್ಲಿ ದಾದಿಯರು ಇಲ್ಲದೆ ಕೇವಲ ವೈದ್ಯರು ಮಾತ್ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದು ಅಸಾಧ್ಯ. ದಿನವಿಡೀ ರೋಗಿಗಳ ಜೊತೆ ಇದ್ದು ಅವರಿಗೆ ಬೇಕಾದಂತಹ ಆರೈಕೆ, ಸಾಂತ್ವನ, ಧೈರ್ಯವನ್ನು ನೀಡುವವರು ದಾದಿಯರು. ಇಂತಹ ಒಂದು ಪವಿತ್ರವಾದ ವೃತ್ತಿಯನ್ನು ಆರಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾದ ಡಾ. ಸೀತಾರಾಮ ರಾವ್ ಮಾತನಾಡಿ “ಇಂದು ಫ್ಲಾರೆನ್ಸ್ ನೈಟಿಂಗೇಲ್ ಜನಿಸಿ 200 ವರ್ಷಗಳು ತುಂಬಿದವು. ಅಂದು ಬ್ರಿಟನ್ ಮತ್ತು ರಷ್ಯಾ ನಡುವೆ ನಡೆದ ಕ್ರಿಮಿಯನ್ ಯುದ್ದದಲ್ಲಿ ಅನೇಕ ಅಸಾಧ್ಯತೆಗಳ ನಡುವೆಯೂ ಗಾಯಾಳುಗಳನ್ನು ಉಪಚರಿಸಿ ಅಲ್ಲಿನ ಸೈನಿಕರ ಕಣ್ಣಿಗೆ ವರು ದೇವತೆಯಾಗಿ ಕಂಡರು. ಇಂದು ಕೋವಿಡ್ – 19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ರೋಗಿಗಳ ಸೇವೆಗೈದು ಅನೇಕರಿಗೆ ದಾದಿಯರು ದೇವತೆಗಳಾಗಿ ಕಂಡಿದ್ದಾರೆ. ದಾದಿಯಾಗಿರುವುದು ಎಂದರೆ ಕೇವಲ ವೃತ್ತಿಯಷ್ಟೇ ಅಲ್ಲ ಅದೊಂದು ಪವಿತ್ರವಾದ ಹಾಗೂ ದೈವಿಕವಾದ ಸೇವೆ. ಸಮಾಜದಲ್ಲಿ ಒಬ್ಬ ವೈದ್ಯರಿಗೆ ಸಿಗುವಷ್ಟು ಪ್ರಾಮುಖ್ಯತೆ ದಾದಿಯರಿಗೂ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ತಮಗೆ ಅನೇಕ ಸಮಸ್ಯೆಗಳಿದ್ದರೂ ನಗುಮೊಗದಿಂದ ಸೇವೆಯನ್ನು ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಕೆ.ಎಂ.ಸಿ. ಅಸ್ಪತ್ರೆ ಅತ್ತಾವರದ ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಗ್ರೇಸಿ ಲೋಬೋ ಉಪಸ್ಥಿತರಿದ್ದು ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಸಿಬ್ಬಂದಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಹಾಗೂ ತಂಡದವರು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ನರ್ಸಿಂಗ್ ಸಿಬ್ಬಂಧಿಗಳಿಗೆ ಮಾರ್ಗದರ್ಶಿಯಾಗಿ ರೂಪಿಸಿರುವ ಕೈಪಿಡಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಾದ ದಾದಿಯರಿಗೆ ಅತಿಥಿಗಳು ಬಹುಮಾನಗಳನ್ನು ನೀಡಿ ಅಭಿನಂದಿಸಿದರು.

ಕಾರ್ಯಕ್ರಮವನ್ನು ಅಪರೇಶನ್ಸ್ ವಿಭಾಗದ ಡಾ. ಅಂಕಿತ ಸರ್ಕಾರ್ ನಡೆಸಿಕೊಟ್ಟು ಧನ್ಯವಾದವನ್ನಿತ್ತರು. ಆಸ್ಪತ್ರೆಯ ಸಿಬ್ಬಂದಿ ಶ್ರೀಮತಿ ಲತಾ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಮಡಿ, ಎಲುಬು ಮತ್ತು ಕೀಲು ತಜ್ಞರಾದ ಡಾ. ಕೆ.ಆರ್ ಕಾಮತ್, ಮನೋ ರೋಗ ತಜ್ಞರಾದ ಡಾ. ಕೃತಿಶ್ರೀ, ಆಸ್ಪತ್ರೆಯ ಹಿರಿಯ ವೈದ್ಯರು, ನರ್ಸಿಂಗ್ ಸಿಬ್ಬಂದಿಗಳು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love