ಕೇಂದ್ರ, ರಾಜ್ಯ ಸರಕಾರಕ್ಕೆ ಧಮ್ ಹಾಗೂ ತಾಕತ್ತಿದ್ದರೆ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸಿ ತೋರಿಸಲಿ-ರಮೇಶ್ ಕಾಂಚನ್

Spread the love

ಕೇಂದ್ರ, ರಾಜ್ಯ ಸರಕಾರಕ್ಕೆ ಧಮ್ ಹಾಗೂ ತಾಕತ್ತಿದ್ದರೆ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸಿ ತೋರಿಸಲಿ-ರಮೇಶ್ ಕಾಂಚನ್

ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಧಮ್ ಹಾಗೂ ತಾಕತ್ತಿದ್ದರೆ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸಿ ತೋರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಒಂದು ತಿಂಗಳಿನಲ್ಲಿ ಸುರತ್ಕಲ್ ಟೋಲ್ ಗೇಟ್ ವಿಲೀನಗೊಳಿಸಲಾಗುವುದೆಂದು ಹೇಳಿದ್ದರು. ಆದರೆ ನುಡಿದಂತೆ ನಡೆಯದೆ ಜನರಿಗೆ ದ್ರೋಹ ಎಸಗಿದ್ದಾರೆ. ಅಕ್ಟೋಬರ್ 18 ರಂದು ಜನರೇ ಸೇರಿ ಟೋಲ್ ತೆರವುಗೊಳಿಸುವ ಹೋರಾಟ ಹಮ್ಮಿಕೊಂಡಿರುವಾಗ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಹೋರಾಟಗಾರರ ಮನೆ ಮನೆಗೆ ತೆರಳಿ ರಾತ್ರೋ-ರಾತ್ರಿ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಅವರ ಮನೆಗೂ ಪೊಲೀಸರು ಭೇಟಿ ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು. ಅದನ್ನು ಬಿಜೆಪಿ ನೇತೃತ್ವದ ಸರಕಾರ ಕಸಿದುಕೊಳ್ಳಲು ಯತ್ನಿಸುತ್ತಿದೆ. ಅದರೊಂದಿಗೆ ಅಕ್ರಮವಾಗಿ ಕಾರ್ಯಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್‌ಗೆ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು ಬಿಜೆಪಿಯ 2 ಸಂಸದರು ಹಾಗೂ 12 ಶಾಸಕರು ಇದ್ದರೂ ಕೂಡ ಜನರಿಗೆ ನ್ಯಾಯ ಒದಗಿಸುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಸರಕಾರಕ್ಕೆ ಧಮ್ ಹಾಗೂ ತಾಕತ್ತು ಇದ್ದರೆ ಜನರಿಗೆ ನೀಡಿದ ಆಶ್ವಾಸನೆಯಂತೆ ತಕ್ಷಣ ಸುರತ್ಕಲ್ ಟೋಲ್ ಗೇಟನ್ನು ತೆರವುಗೊಳಿಸಿ ಹಗಲು ದರೋಡೆಯನ್ನು ನಿಲ್ಲಿಸಲಿ. ಇಲ್ಲದಿದ್ದರೆ ನಾಗರಿಕ ಹೋರಾಟದೊಂದಿಗೆ ಕೈ ಜೋಡಿಸಿ ಅಕ್ರಮವಾಗಿ ಕಾರ್ಯಚರಿಸುತ್ತಿರುವ ಈ ಟೋಲನ್ನು ತೆರವುಗೊಳಿಸಲಾಗುವುದೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love