ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಯೋಜನೆ, ಜೂ.5 ಕ್ಕೆ ನಾಟಿ ಕಾರ್ಯ ಆರಂಭ – ರಘುಪತಿ ಭಟ್

Spread the love

ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಯೋಜನೆ, ಜೂ.5 ಕ್ಕೆ ನಾಟಿ ಕಾರ್ಯ ಆರಂಭ – ರಘುಪತಿ ಭಟ್

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕಡೆಕಾರ್ ಗ್ರಾಮ ಪಂಚಾಯಿತಿಯ ಕುತ್ಪಾಡಿಯಲ್ಲಿ ವಿಶ್ವಪರಿಸರ ದಿನಾಚರಣೆಯಂದು ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಯೋಜನೆಯಡಿ 2ಸಾವಿರ ಎಕರೆಗೂ ಅಧಿಕ ಹಡಿಲು ಕೃಷಿ ಭೂಮಿಯಲ್ಲಿ ನಾಟಿ ಕಾರ್ಯಕ್ಕೆ ಇದೇ 5 ರಿಂದ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ನಾಟಿಗೆ ಸಿದ್ಧವಾದ ಚಾಪೆ ನೇಜಿ ವೀಕ್ಷಿಸಿ ಅವರು ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು.

ಸುಮಾರು ರೂ.5 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಈಗಾಗಲೇ 250 ರಿಂದ 300 ಕಿ.ಮೀ ನಷ್ಟು ಉದ್ದದ ತೋಡುಗಳ ಹೂಳನ್ನು ತೆಗೆಯಲಾಗಿದೆ. ಇದಲ್ಲದೇ ನಾಟಿ, ಕಟಾವಿಗಾಗಿ ತಮಿಳುನಾಡಿನಿಂದ ೫ ಮತ್ತು ಇತರೆಡೆಯಿಂದಲೂ ಸೇರಿ ಒಟ್ಟು 13 ಯಂತ್ರಗಳನ್ನು ಬಳಿಸಿಕೊಂಡು ನಾಟಿ ಕಾರ್ಯ ಮಾಡಲಾಗುವುದು. ಜಿಲ್ಲೆಯಲ್ಲಿ 5ಸಾವಿರಕ್ಕಿಂತಲೂ ಅಧಿಕ ಹಡಿಲು ಭೂಮಿ ಇದ್ದು, ಮುಂದಿನ ವರ್ಷಗಳಲ್ಲಿ ಈ ಎಲ್ಲ ಭಾಗದಲ್ಲಿಯೂ ಈ ಯೋಜನೆಯ ಮೂಲಕ ಕೃಷಿ ಕಾರ್ಯ ಮಾಡಲು ಪ್ರಯತ್ನಿಸಲಾಗುವುದು. ಒಂದು ಎಕರೆಗೆ ಸುಮಾರು ರೂ.25ಸಾವಿರ ಖರ್ಚು ತಗುಲುವ ಅಂದಾಜು ಹಾಕಲಾಗಿದೆ. ಈ ವರ್ಷ 2ಸಾವಿರ ಎಕರೆಯಿಂದ ಸುಮಾರು 24ಲಕ್ಷ ಕೆ.ಜಿ ಭತ್ತ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಕುಚ್ಚಲಕ್ಕಿ ಮಾಡಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ. ಕೃಷಿ ಚಟುವಟಿಕೆ ಆಗುವುದರಿಂದ ಅಂತರ್ಜಲ ವೃದ್ಧಿ ಕೂಡಾ ಆಗುತ್ತದೆ ಎಂದರು.

ಬೆಳೆಗೆ ಕಾಡು ಪ್ರಾಣಿಗಳ ರಕ್ಷಣೆಗೆ ಏನು ಉಪಾಯ ಮಾಡಬಹುದು, ನೀರಿನ ಸಮಸ್ಯೆಗೆ ಪರಿಹಾರ ಹೇಗೆ ಕಂಡುಕೊಳ್ಳಬಹುದು ಎನ್ನುವ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ವರ್ಷದಲ್ಲಿ ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಅನುಕೂಲವಾಗುವಂತೆ ಫಾರ್ಮ್ ಮಿಷನರಿ ಬ್ಯಾಂಕ್ ಪ್ರಾರಂಭಿಸಲಾಗುವುದು. ಇದರಿಂದ ನಾಟಿ ಕಾರ್ಯಕ್ಕೆ ಕೃಷಿ ಯಂತ್ರೋಕರಣಗಳನ್ನು ರೈತರು ಬಾಡಿಗೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಒಟ್ಟಾರೆ ಕೃಷಿ ಚಟುವಟಿಕೆ ಮುಂದುವರಿಯಲು ದಾನಿಗಳು ಮುಂದೆ ಬರಬೇಕು. ಹೀಗಾದಲ್ಲಿ ಮಾತ್ರ ಕೇದಾರೋತ್ಥಾನ ಟ್ರಸ್ಟ್‌ನ ಯೋಜನೆ ಯಶಸ್ಸು ಗಳಿಸಲು ಸಾಧ್ಯ ಎಂದರು. ಇದಕ್ಕೂ ಮುನ್ನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಶಂಕರ್ ಚಾಪೆ ನೇಜಿ ತಯಾರಿ ಮತ್ತು ನಾಟಿ ಕಾರ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಕೆಂಪೇಗೌಡ, ವಲಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್, ಕೆ.ವಿ.ಕೆಯ ಮುಖ್ಯಸ್ಥ ಡಾ.ಧನಂಜಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿನಕರ ಬಾಬು, ಕೇದಾರೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಕಡೇಕಾರ್, ಪ್ರತಾಪ್ ಹೆಗ್ಡೆ ಮಾರಾಳಿ, ರಾಘವೇಂದ್ರ ಕಿಣಿ, ಕೃಷಿ ಯಂತ್ರೋಪಕರಣಗಳ ಮಾರಾಟಗಾರ ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.


Spread the love