ಕೇರಳದಲ್ಲಿ ಮೆದುಳು ತಿನ್ನೋ ಅಮೀಬಾ ಸೋಂಕಿಗೆ 19 ಜನ ಬಲಿ: ಕರ್ನಾಟಕದಲ್ಲಿ ಕಟ್ಟೆಚ್ಚರ
ನೆರೆ ರಾಜ್ಯ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಅಂದರೆ ನೆಗ್ಲೆರಿಯಾ ಫೊವ್ಲೆರಿ ಅಮೀಬಾ ಕಾಟ ಜೋರಾಗಿದೆ. ಈಗಾಗಲೇ ಈ ಸೋಂಕಿಗೆ 19 ಜನರು ಬಲಿ ಆಗಿದ್ದು, ಸಾವಿನ ಸಂಖ್ಯೆ ಏರಿಕೆ ಆಗುತ್ತಿದೆ. ಕೇರಳದಲ್ಲಿ ಅಮೀಬಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಸದ್ಯ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನೆರೆಯ ರಾಜ್ಯ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಸೋಂಕು ಜೋರಾಗಿದೆ. ಈ ಸೋಂಕು ನೆಗ್ಲಿರಿಯಾ ಫೊವ್ಲೆರಿ ಎಂಬ ಅಮೀಬಾದಿಂದ ಹರಡುತ್ತದೆ. ಈ ಸೋಂಕಿಗೆ ಕೇರಳದಲ್ಲಿ ಇಲ್ಲಿಯವರೆಗೂ 19 ಜನರು ಸಾವನ್ನಪ್ಪಿದ್ದಾರೆ. 67 ಜನರು ಸೋಂಕಿತರಾಗಿದ್ದಾರೆ. ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ.
ಒಂದು ವೇಳೆ ಅಂತಹ ನೀರಿನಲ್ಲಿ ಈಜಾಡಿದರೆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳನ್ನ ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಜೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವು ಕೂಡ ಸಂಭವಿಸಲಿದೆ. ಸೋಂಕು ತಗುಲಿದ 1 ರಿಂದ 9 ದಿನಗಳಲ್ಲಿ ರೋಗ ಲಕ್ಷಣಗಳು ಅಂದರೆ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ.
ಸೋಂಕಿಗೆ ಚಿಕಿತ್ಸೆ ಹಾಗೂ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
- ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗದೇ ಇರುವುದು.
- ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸುವುದು.
- ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು.
- ಒಂದು ವೇಳೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು.
- ಇನ್ನು ಕರ್ನಾಟಕದಲ್ಲಿ ಯಾವುದೇ ರೀತಿ ನೆಗ್ಲೆರಿಯಾ ಫೊವ್ಲೆರಿ ಸೋಂಕು ಕಾಣಿಸಿಕೊಂಡಿಲ್ಲ. ಆದರು ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತಿದೆ.