ಕೇಳಿದಾಕ್ಷಣ ಕೊಡಲು ಬಸ್ ಟಿಕೇಟ್ ಅಲ್ಲ: ಮಧು ಜಿ ಮಾದೇಗೌಡ

Spread the love

ಕೇಳಿದಾಕ್ಷಣ ಕೊಡಲು ಬಸ್ ಟಿಕೇಟ್ ಅಲ್ಲ: ಮಧು ಜಿ ಮಾದೇಗೌಡ

ಭಾರತೀನಗರ: ಪಕ್ಷಕ್ಕೆ ಸೇರ್ಪಡೆಗೊಳ್ಳದೆ ಯಾರೋ ಟಿಕೆಟ್ ಕೇಳಿದಾಕ್ಷಣ ಕೊಡಲು ಇದು ಬಸ್ ಟಿಕೇಟ್ ಅಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲಬೇಡ, ಮದ್ದೂರು ಕ್ಷೇತ್ರದಲ್ಲಿ ಎಸ್.ಗುರುಚರಣ್ ಅವರು ಸ್ಪರ್ಧಿಸುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ ಮಾದೇಗೌಡ ಅವರು ಸ್ಪಷ್ಟಪಡಿಸಿದರು.

ಭಾರತೀನಗರದ ಭಾರತೀ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಚಿಕ್ಕರಸಿನಕೆರೆ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುಚರಣ್ ಅವರನ್ನು ಹೊರತು ಪಡಿಸಿ ಬೇre ಯಾರಿಗೋ ಟಿಕೆಟ್‌ ಕೊಟ್ಟು ಸ್ಪರ್ಧೆಗಿಳಿಯುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮ್ಮ ನಿರ್ಣಯಕ್ಕೆ ಬಿಟ್ಟಿದ್ದಾರೆ. ನಾನು ಮತ್ತು ವಿಧಾನ ಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಅವರು ಎಸ್.ಗುರುಚರಣ್ ಅವರಿಗೆ ಟಿಕೆಟ್ ಕೊಡಬೇಕೆಂದು ತಾಕೀತು ಮಾಡಿದ್ದೇವೆ. ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವನ್ನು ಈಗಿನಿಂದಲೇ ಪ್ರಾರಂಭಿಸಿದ್ದೇವೆ ಎಂದರು.

ಪಕ್ಷಕ್ಕೆ ಸೇರ್ಪಡೆಗೊಳ್ಳದೆ ಯಾರೋ ಟಿಕೆಟ್ ಕೇಳಿದಾಕ್ಷಣ ಕೊಡಲು ಇದು ಬಸ್ ಟಿಕೇಟ್ ಅಲ್ಲ ರಾಷ್ಟ್ರೀಯ ಪಕ್ಷದಲ್ಲಿ ಕೆಲವು ನಿಯಮಗಳಿರುತ್ತವೆ. ಹಾಗಾಗಿ ಎಸ್.ಗುರುಚರಣ್ ಅವರು ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಖಚಿತ ಎಂದರು.

ಕಳೆದ 4 ವಿಧಾನ ಸಭಾ ಚುನಾವಣೆಯಲ್ಲಿ ಇಬ್ಬರಲ್ಲಿ ನೇರ-ನೇರ ಚುನಾವಣೆಗಳು ನಡೆಯುತ್ತಿದ್ದವು. ಆದರೆ ಈ ಭಾರಿ 4 ಅಭ್ಯರ್ಥಿಗಳು ಸ್ಪರ್ಧೆಗಿಳಿಯುವುದರಿಂದ 60ರಿಂದ 70ಸಾವಿರ ಮತಗಳನ್ನು ತೆಗೆದುಕೊಳ್ಳಲು ಕಾರ್ಯಕರ್ತರು ಸಜ್ಜಾಗಬೇಕೆಂದರು.

ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಅವರು ಮಾತನಾಡಿ, ಪ್ರಜಾಧ್ವನಿ ಕಾರ್ಯಕ್ರಮವನ್ನು ಮದ್ದೂರು ತಾಲ್ಲೂಕಿನಲ್ಲಿ ಫೆ.11ರಂದು ತಾಲ್ಲೂಕು ಸರ್ಕಾರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿತುಂಬಬೇಕೆಂದು ಕೋರಿದರು.

ಕಾಂಗ್ರೆಸ್ ಮುಖಂಡ ಆಶಯ್‌ ಮಧುಮಾದೇಗೌಡ ಅವರು ಮಾತನಾಡಿ, ಮಾಜಿ ಸಂಸದ ದಿ.ಜಿ.ಮಾದೇಗೌಡರ ಕುಟುಂಬವನ್ನು ಕೈಹಿಡಿದು ಮಧು ಜಿ ಮಾದೇಗೌಡ ಅವರನ್ನು ಆಯ್ಕೆಗೊಳಿಸಿದ್ದೀರಿ. ಅದರಂತೆ ಗುರುಚರಣ್ ಅವರನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಸ್.ಎಂ.ಕೃಷ್ಣ ಅವರ ಕುಟುಂಬವನ್ನು ಕೈಹಿಡಿಯಬೇಕೆಂದು ಕೋರಿದರು.

ನಮ್ಮ ತಂದೆಯವರ ಗೆಲುವಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲಬಂದತಾಗಿದೆ. ಪ್ರಜ್ಞಾವಂತರು ಯೋಚಿಸಿ ಮತನೀಡಿದ್ದಾರೆ. ಅದರಂತೆ ಈ ಚುನಾವಣೆಯಲ್ಲೂ ಕೈಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಆಶಯ ವ್ಯಕ್ತಪಡಿಸಿದರು.

ಇದೇ ವೇಳೆ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ನಂಜೇಗೌಡ, ಚಂದೂಪುರ ಪಾಪಣ್ಣ, ಸಿದ್ದೇಗೌಡ, ಅಜ್ಜಹಳ್ಳಿ ರಾಮಕೃಷ್ಣ, ವೀಣಾ, ನಾಗರಾಜು, ಕೃಷ್ಣಪ್ಪ, ಆರ್.ಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಿರೀಶ್, ಗ್ರಾ.ಪಂ ಅಧ್ಯಕ್ಷೆ ಸೌಮ್ಯಪುಟ್ಟಸ್ವಾಮಿ ಸೇರಿದಂತೆ ಹಲವರಿದ್ದರು.


Spread the love