
ಕೈಲಾಗದ ಶತ್ರು, ಅವರ ಕೊನೆಯ ಅಸ್ತ್ರವೇ ಅಪಪ್ರಚಾರ – ಕಿರಣ್ ಆಳ್ವ
ಕಾಪು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಪು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನಸ್ತೋಮವನ್ನು ಕಂಡು ಬೆಚ್ಚಿ ಬಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ, ಚುನಾವಣೆಗೂ ಮುನ್ನವೇ ಅಪಪ್ರಚಾರದ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಪು ಬಿಜೆಪಿ ಮಾಧ್ಯಮ ವಿಭಾಗದ ಪ್ರಮುಖ್ ಕಿರಣ್ ಆಳ್ವ ವ್ಯಂಗ್ಯವಾಡಿದ್ದಾರೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಯವರು ಹೆಲಿಕ್ಯಾಫ್ಟರ್ ನಲ್ಲಿ ಹಣ ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ ಎಂಬ ಸೊರಕೆಯವರ ವಾದ ಸತ್ಯಕ್ಕೆ ದೂರವಾದುದು. ಇಂತಹ ಹಸಿ ಹಸಿ ಸುಳ್ಳುಗಳನ್ನೇ ಸತ್ಯ ಎನ್ನುವಂತೆ ಬಿಂಬಿಸುತ್ತಾ ಬಂದಿರುವ ಕಾಂಗ್ರೆಸ್ ಇಂದು ಅವಸಾನದ ಅಂಚಿಗೆ ಬಂದು ತಲುಪಿದೆ. ಇನ್ನಾದರು ಕಾಂಗ್ರೆಸಿಗರು ಪಾಠ ಕಲಿಯಬೇಕು, ಇಲ್ಲದಿದ್ದರೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಶಾಸಕ ಲಾಲಾಜಿ ಮೆಂಡನ್ ರವರು, ಈ ಬಾರಿ ಬರೋಬ್ಬರಿ 3,000 ಕೋ.ರೂಪಾಯಿಗೂ ಮಿಕ್ಕಿ ಅನುದಾನವನ್ನು ತಂದು ಸರ್ವಾಂಗೀಣ ಅಭಿವೃದ್ಧಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಗುರ್ಮೆ ಸುರೇಶ್ ಶೆಟ್ಟರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.