ಕೊಚ್ಚಿಹೋದ ಜಲಾಶಯ ಮುಂಭಾಗದ ಸೇತುವೆ

Exif_JPEG_420
Spread the love

ಕೊಚ್ಚಿಹೋದ ಜಲಾಶಯ ಮುಂಭಾಗದ ಸೇತುವೆ

ಯಳಂದೂರು: ನೀರಿನ ರಭಸಕ್ಕೆ ಜಲಾಶಯದ ಮುಂಭಾಗದಲ್ಲಿದ್ದ ಸೇತುವೆ ಕೊಚ್ವಿಹೋಗಿದ್ದು ರಸ್ತೆ ಕುಸಿಯುವ ಆತಂಕ ಸೃಷ್ಟಿಯಾಗಿದೆ.

ಯಳಂದೂರು ತಾಲೂಕಿನ ಗುಂಬಳ್ಳಿ ಸಮೀಪವಿರುವ ಹೊಸಹಳ್ಳಿಕೆರೆ (ಕೃಷ್ಣಯ್ಯನಕಟ್ಟೆ) ಜಲಾಶಯವು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ತುಂಬಿ ಕೋಡಿ ಬಿದ್ದಿದ್ದು ಕೋಡಿಬಿದ್ದ ನೀರಿನ ರಭಸಕ್ಕೆ ಮುಂಭಾಗವಿರುವ ಸೇತುವೆ ನೀರಿನ ಪೈಪ್ ಗೆ ಹಾನಿಯಾಗಿದ್ದು ತಡೆಗೋಡೆ ಕೊಚ್ಚಿಹೋಗಿದೆ ಇದರಿಂದ ರಸ್ತೆಯು ಕುಸಿಯುತ್ತಿದ್ದು ಭಾರಿ ಬಿರುಕು ಕಾಣಿಸಿಕೊಂಡಿದೆ.ಇದೀಗ ಸೇತುವೆ ಕುಸಿದ ರಸ್ತೆಯಲ್ಲಿಯೇ ತಾಲೂಕಿನ ಪ್ರಸಿದ್ದ ಯಾತ್ರಸ್ಥಳವಾದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳಬೇಕಾಗಿದ್ದು ರಸ್ತೆ ಕುಸಿದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಬಿಳಿಗಿರಿರಂಗನಾಥ ಹುಲಿಸಂರಕ್ಷಿತ ಅರಣ್ಯ ಪ್ರದೇಶವನ್ನೆ ಹೊದ್ದುಕೊಂಡಿರುವ ಜಲಾಶಯವು ಈ ಬಾರಿ ಎರಡು ಸಲ ತುಂಬಿರುವುದು ರೈತರಲ್ಲಿ ಖುಷಿಯನ್ನುಂಟು ಮಾಡಿದೆ. ಈ ಜಲಾಶಯದ ಕೋಡಿಬಿದ್ದ ನೀರು ಸಾಗುವುದಕ್ಕೆ ಹಾಗೂ ಬೆಟ್ಟ ಹಾಗೂ ಯಳಂದೂರನ್ನು ಸಂಪರ್ಕಿಸುವ ಸೇತುವೆ ಇದಾಗಿದ್ದು ಸೇತುವೆ ಯ ಬೃಹತ್ ಪೈಪ್ ಕೊಚ್ಚಿಹೋಗಿ ಬಾರಿ ಬಿರುಕು ಸೃಷ್ಟಿಯಾಗಿದೆ. ಇದರಿಂದಾಗಿ ಸೇತುವೆಯ ಆಸುಪಾಸು ಕುಸಿದು ಗುಂಡಿ ನಿರ್ಮಾಣವಾಗಿದೆ. ಈ ಬಿರುಕು ಬಿಟ್ಟ ಸೇತುವೆಯ ಮೇಲೆಯೇ ಬೆಟ್ಟಕ್ಕೆ ಬಸ್ ಮತ್ತು ಕಾರು ಸೇರಿದಂತೆ ವಾಹನಗಳು ಓಡಾಡುತ್ತಿದ್ದು ಅಪಾಯ ಎದುರಾಗುವ ಸಾಧ್ಯತೆಯಿದೆ.

ಸೇತುವೆ ಕುಸಿದು ರಸ್ತೆ ಬಿರುಕು ಬಿಟ್ಟು ನಾಲ್ಕು ದಿನಗಳು ಕಳೆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಇರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಕನ್ನಡಿಯಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಭಾರೀ ಅವಘಡ ಸಂಭವಿಸುವ ಮುನ್ನ ಪರಿಹಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love