
ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ: ಬಿ.ಎಸ್.ಯಡಿಯೂರಪ್ಪ
ಕೆ.ಆರ್.ಪೇಟೆ: ಕಳೆದ ಉಪಚುನಾವಣೆಯಲ್ಲಿ ನಾನು ನೀಡಿದ ಭರವಸೆಯನ್ನು ಈಡೇರಿಸಿದ್ದು, ಕೊಟ್ಟ ಮಾತಿನಂತೆ ನಾರಾಯಣಗೌಡರಿಗೆ ಸಚಿವ ಸ್ಥಾನ ನೀಡಿ, ತಾಲ್ಲೂಕಿನ ಅಭಿವೃದ್ಧಿಗೆ 1800 ಕೋಟಿ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರವಾಗಿ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬೂಕನಕೆರೆ ನನ್ನ ಹುಟ್ಟೂರು ನಾನು ಇಲ್ಲಿಗೆ ಬಂದಾಗಲೆಲ್ಲಾ ನನಗೆ ಬಾಲ್ಯದ ನೆನಪು ಕಾಡುತ್ತದೆ. ನಾನು ನನ್ನ ಅಣ್ಣನ ಜೊತೆ ತೆಂಡೆಕೆರೆ ಸಂತೆಗೆ ಹೋಗಿ ವ್ಯಾಪಾರ, ವಹಿವಾಟು ಮುಗಿಸಿ ಸಂಜೆ ಬರುತ್ತಿದ್ದೆ. ನನ್ನನ್ನು ಸಾಕಿದ ನನ್ನ ಅಣ್ಣ ಮತ್ತು ಮಾವನವರು ನಾನು ಸದಾ ಋಣಿಯಾಗಿರುತ್ತೇನೆ. ಇದರಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ತಮ್ಮ ಬಾಲ್ಯದ ನೆನಪು ಮಾಡಿಕೊಂಡರು.
ನಮ್ಮ ರೈತರಿಗೆ ಅನುಕೂಲವಾಗಲೆಂದು ಬರಡು ಪ್ರದೇಶಗಳಾದ ಸಂತೇಬಾಚಹಳ್ಳಿ, ಶೀಳನೆರೆ, ಬೂಕನಕೆರೆ, ಅಕ್ಕಿಹೆಬ್ಬಾಳು ಹೋಬಳಿಗಳಿಗೆ ನೀರಾವರಿ ಯೋಜನೆಗಾಗಿ ನಾಲ್ಕು ಏತನೀರಾವರಿ ಯೋಜನೆಗಳನ್ನು ಮಂಜೂರು ಮಾಡಿದ್ದೇನೆ. ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಲು ಹಿಂಜರಿಯುವ ಇಂತಹ ಕಾಲದಲ್ಲಿ ನಾನು ಪಕ್ಷ ಸಂಘಟನೆಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಯಡಿಯೂರಪ್ಪನ ಕಾಲ ಮುಗಿಯಿತು ಎಂದು ಹಿಯ್ಯಾಳಿಸುವ ನಮ್ಮ ರಾಜಕೀಯ ವಿರೋಧಿಗಳಿಗೆ ಈ ಚುನಾವಣೆಯಲ್ಲಿ 130ಕ್ಕೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಪಕ್ಷಕ್ಕೆ ಕೊಡಿಸುವ ಮೂಲಕ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದರ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದು ಗುಡುಗಿದರು.
ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ ಮಾತನಾಡಿ ಹಿಂದೆ ಸೇವಾ ಮನೋಭಾವನೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದು ಜನಸೇವೆ ಮಾಡುತ್ತಿದ್ದರು. ಆದರೆ ಈಗಿನ ಕಲುಷಿತ ರಾಜಕಾರಣ ವ್ಯವಸ್ಥೆಯಲ್ಲಿ ಕಲ್ಲುಗಣಿಗಾರಿಕೆ, ರಿಯಲ್ ಎಸ್ಟೇಟ್ ಸೇರಿದಂತೆ ಉದ್ಯಮಿಗಳು ತಮ್ಮ ಅಕ್ರಮ ಆಸ್ತಿಗಳನ್ನು ರಕ್ಷಣೆ ಮಾಡಿಕೊಳ್ಳಲು ಹಣ ನೀಡಿ ಪಕ್ಷದ ಟಿಕೆಟ್ ಪಡೆದು ಚುನಾವಣೆಯಲ್ಲಿ ಮತದಾರರಿಗೆ ಆಮಿಷಗಳನ್ನು ಒಡ್ಡಿ ಅಧಿಕಾರವನ್ನು ಗಳಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಿಮ್ಮ ಬಳಿ ಬಂದು ಮತ ಕೇಳಬಹುದು. ನೀವು ಮತ ಚಲಾಯಿಸುವ ಮೊದಲು ಸತ್ಯ, ನಿಷ್ಟೆ, ಪ್ರಾಮಾಣಿಕತೆ ಎಲ್ಲಿದೆ ಎಂಬುದನ್ನು ಅರಿತು ಮತದಾನ ಮಾಡಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ, ತಾಲ್ಲೂಕು ಬಿಜೆಪಿ ಉಸ್ತುವಾರಿ ರಾಜೇಶ್ ಬಾಟಿಯಾ, ಮೂಡಾ ಅಧ್ಯಕ್ಷ ಕೆ.ಶ್ರಿನಿವಾಸ್, ಜಿ.ಪಂ.ಮಾಜಿ ಉಪಾಧ್ಯಕ್ಷರಾದ ಕಿಕ್ಕೇರಿ ಪ್ರಭಾಕರ್, ಶೀಳನೆರೆ ಅಂಬರೀಷ್, ಬ್ಯಾಲದಕೆರೆ ಪಾಪೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿ ತಾ.ಪಂ.ಸದಸ್ಯರಾದ ಮೀನಾಕ್ಷಿ ಪುಟ್ಟರಾಜು, ರಾಜಾಹುಲಿ ದಿನೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರಮೇಶ್, ಪುರಸಭಾ ಸದಸ್ಯ ಕೆ.ಎಸ್ ಸಂತೋಷ್ ಕುಮಾರ್, ಮಾಜಿ ಸದಸ್ಯ ಕೆ.ಎಸ್.ಹರಿಪ್ರಸಾದ್, ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.