
ಕೊಡಗಿನಲ್ಲಿ ಒಂದೇ ದಿನದಲ್ಲಿ ಇಬ್ಬರು ಹುಲಿಗೆ ಬಲಿ
ಮಡಿಕೇರಿ: ಕೊಡಗಿನಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು ಒಂದೇ ದಿನದ ಅವಧಿಯಲ್ಲಿ ಇಬ್ಬರು ಹುಲಿಗೆ ಬಲಿಯಾಗಿದ್ದಾರೆ. ಇದರಿಂದ ಕೊಡಗಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಒಂದೋ ಹುಲಿಯನ್ನು ಸೆರೆಹಿಡಿಯಿರಿ ಅಥವಾ ಕೊಲ್ಲಲು ಅನುಮತಿ ನೀಡಿ ಎಂಬ ಆಕ್ರೋಶಗಳು ಜನವಲಯದಲ್ಲಿ ವ್ಯಕ್ತವಾಗಿದೆ.
ಈಗ ಕಾಫಿ ಕೊಯ್ಲು ಸಮಯವಾಗಿದ್ದು, ಇದೇ ಸಮಯದಲ್ಲಿ ಹುಲಿ ಅಟ್ಟಹಾಸ ಮೆರೆಯುತ್ತಿರುವುದರಿಂದ ಕಾರ್ಮಿಕರು ಕಾಫಿ ತೋಟದತ್ತ ತೆರಳಲು ಭಯಪಡುವಂತಾಗಿದೆ. ಎರಡು ದಿನಗಳ ಅವಧಿಯಲ್ಲಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ ಬಳಿಯ ಚೂರಿಕಾಡು ಪಂಚಳ್ಳಿ ಎಂಬಲ್ಲಿ ಭಾನುವಾರ ಸಂಣೆ ಕಾರ್ಮಿಕ ಚೇತನ್(18) ಎಂಬಾತನ ಮೇಲೆ ದಾಳಿ ಮಾಡಿ ಸಾಯಿಸಿ ದೇಹದ ಕೆಲ ಭಾಗವನ್ನು ತಿಂದು ಹಾಕಿದ್ದರೆ, ಸೋಮವಾರ ಬೆಳಿಗ್ಗೆ ಬಾಡಗ ಗ್ರಾಮದ ಕಾರ್ಮಿಕ ರಾಜು(60) ಎಂಬಾತನನ್ನು ಕೊಂದು ಹಾಕಿದೆ. ಒಂದೇ ದಿನದಲ್ಲಿ ಹುಲಿದಾಳಿಗೆ ಇಬ್ಬರು ಬಲಿಯಾದ ವಿಚಾರ ತಿಳಿಯುತ್ತಿದ್ದಂತೆಯೇ ಜನ ಆಕ್ರೋಶಗೊಂಡಿದ್ದಾರೆ.
ಹುಲಿದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಕೆ ಜಿ ಬೋಪಯ್ಯನವರು ಆರ್ ಎಫ್ ಓ ಹಾಗೂ ನಿರ್ದೇಶಕರ ಜೊತೆ ಮಾತುಕತೆ ನಡೆಸಿ ಸ್ಥಳದಲ್ಲೇ ಎರಡೂವರೆ ಲಕ್ಷ ರೂ ಪರಿಹಾರಕ್ಕೆ ಸೂಚನೆ ನೀಡಿದರಲ್ಲದೆ, ಹುಲಿ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಜತೆಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ನರಹಂತಕ ಹುಲಿಯನ್ನು ಕೊಲ್ಲಲು ಶೂಟ್ ಅಟ್ ಸೈಟ್ ಆರ್ಡರ್ ಗಾಗಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಕಳೆದ 24 ಗಂಟೆಯೊಳಗೆ ಎರಡು ಕೂಲಿ ಕಾರ್ಮಿಕರ ಜೀವಗಳನ್ನು ಬಲಿ ತೆಗೆದುಕೊಂಡ ನರಹಂತಕ ಹುಲಿಯನ್ನು ಕೂಡಲೇ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ನರಹಂತಕ ಹುಲಿಯನ್ನು ಹಿಡಿದು ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡಿ ನಂತರ ಅಲ್ಲಿಯೂ ಮತ್ತೊಂದು ಅವಘಡ ನಡೆಯುವುದಕ್ಕಿಂತ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ನರಹಂತಕ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ. ಇಲ್ಲವೇ ಈ ಕೂಡಲೇ ಕಾರ್ಯಾಚರಣೆ ಮೂಲಕ ಸೆರೆಹಿಡಿದು ಬೇರೆ ಜಾಗಕ್ಕೆ ಸ್ಥಳಾಂತರ ಮಾಡದೆ, ಮೃಗಾಲಯದಲ್ಲಿಯೇ ಕೂಡಿಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಒಮ್ಮೆ ಮನುಷ್ಯರ ರಕ್ತದ ರುಚಿ ನೋಡಿರುವ ವ್ಯಾಘ್ರ ಮತ್ತೊಮ್ಮೆ ಮನುಷ್ಯರ ಮೇಲೆಯೇ ದಾಳಿ ಮಾಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಕುಟ್ಟ ಸಮೀಪದ ಕೆ.ಬಾಡಗ ವ್ಯಾಪ್ತಿಯ ಚೂರಿಕಾಡುವಿನಲ್ಲಿ ನಡೆದ ದುರ್ಘಟನೆ ಸಾಕ್ಷಿಯಾಗಿದೆ. ಈ ಕೂಡಲೇ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿದ್ದರೆ ಗ್ರಾಮಸ್ಥರು ಕೂಡ ಇಲಾಖೆಗೆ ಸಾಥ್ ನೀಡುತ್ತಾರೆ. ಕಾನೂನಿಗೆ ಬೆಲೆ ಕೊಡುವ ಮಂದಿ ಜಿಲ್ಲೆಯವರಾಗಿರುವ ಕಾರಣ ವನ್ಯಮೃಗಗಳ ಕಾಟವನ್ನು ಈಗಲೂ ಸಹಿಸಿಕೊಂಡಿದ್ದಾರೆ. ಅರಣ್ಯದ ಗಡಿ ಗುರುತಿಸುವ ಇಲಾಖೆಗೆ ಕಾಡಿನೊಳಗಿರುವ ವನ್ಯ ಮೃಗಗಳು ಆ ಗಡಿ ದಾಟಿ ರೈತರ ಜಮೀನಿಗೆ ಬಾರದಂತೆ ತಡೆಯಲು ಯೋಜನೆ ರೂಪಿಸಬಹುದಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.