
ಕೊಡಗಿನಲ್ಲಿ ಚೇತರಿಸಿದ ಮುಂಗಾರು.. ಭೂಕುಸಿತದ ಆತಂಕ..
ಕೊಡಗಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಎರಡು ದಿನಗಳಿಂದ ಮುಂಗಾರು ಬಿರುಸುಗೊಂಡಿದ್ದು, ಭಾಗಮಂಡಲದಲ್ಲಿ ಕಾವೇರಿ ಉಕ್ಕಿ ಹರಿಯುತ್ತಿರುವ ಪ್ರಮಾಣ ತ್ರಿವೇಣಿ ಸಂಗಮ ಜಲಾವೃತವಾಗುವ ಹಂತ ತಲುಪಿದೆ. ಇನ್ನು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ಮಳೆ ಹಾನಿ ಸಂಭವಿಸುತ್ತಿದೆ. ಜತೆ ಜತೆಯಲ್ಲಿಯೇ ಭೂಕುಸಿತ ಆತಂಕವೂ ಹೆಚ್ಚಾಗಿದೆ.
ಇನ್ನು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೇಗಿದೆ ಎಂಬುದನ್ನು ನೋಡಿದ್ದೇ ಆದರೆ, ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಸರಾಸರಿ ಮಳೆಯನ್ನು ಗಮನಿಸಿದರೆ 58.12 ಮಿ.ಮೀ.ನಷ್ಟು ಮಳೆ ಸುರಿದೆ. ಕಳೆದ ವರ್ಷ ಇದೇ ದಿನ ಎಷ್ಟು ಮಳೆಯಾಗಿತ್ತು ಎಂಬುದನ್ನು ನೋಡಿದ್ದೇ ಆದರೆ 68.01 ಮಿ.ಮೀ. ಮಳೆ ಸುರಿದಿತ್ತು. ಇಷ್ಟೇ ಅಲ್ಲದೆ ಜನವರಿಯಿಂದ ಇಲ್ಲಿಯವರೆಗೆ ಸುರಿದಿರುವ ಮಳೆಯ ಪ್ರಮಾಣವನ್ನು ಗಮನಿಸಿದರೆ ಈ ಬಾರಿ ಕೇವಲ 451.44 ಮಿ.ಮೀ.ನಷ್ಟು ಮಳೆಯಾಗಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1024.84 ಮಿ.ಮೀ ಮಳೆಯಾಗಿತ್ತು. ಈ ಮಳೆಯ ಪ್ರಮಾಣ ಗಮನಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ದುರ್ಬಲವಾಗಿದೆ ಎಂಬುದಂತು ನಿಜ.
ಇಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ತಾಲೂಕುವಾರು ಮಳೆಯ ಪ್ರಮಾಣವನ್ನು ಗಮನಿಸಿದರೆ ಮಡಿಕೇರಿ ತಾಲ್ಲೂಕಿನಲ್ಲಿ ಗುರುವಾರ ಸರಾಸರಿ 87.28 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 98.28 ಮಿ.ಮೀ. ಮಳೆಯಾಗಿತ್ತಲ್ಲದೆ, ಜನವರಿಯಿಂದ ಇಲ್ಲಿಯವರೆಗಿನ 705.17 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1510.87 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಗುರುವಾರ ಸರಾಸರಿ 47.08 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 48.73 ಮಿ.ಮೀ. ಆಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಈ ಬಾರಿ 326.57 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 827.32 ಮಿ.ಮೀ. ಮಳೆ ಸುರಿದಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಗುರುವಾರ ಸರಾಸರಿ 40ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 57.03 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 322.59 ಮಿ.ಮೀ. ಆಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 736.34 ಮಿ.ಮೀ. ಮಳೆಸುರಿದಿತ್ತು.
ಒಂದು ದಿನದ ಅವಧಿಯಲ್ಲಿ ಹೋಬಳಿವಾರು ಮಳೆ ಹೇಗೆ ಸುರಿದಿದೆ ಎನ್ನುವುದನ್ನು ನೋಡುತ್ತಾ ಹೋದರೆ, ಮಡಿಕೇರಿ ವ್ಯಾಪ್ತಿಯಲ್ಲಿ 54.20, ನಾಪೋಕ್ಲು 76.40, ಸಂಪಾಜೆ 98.50, ಭಾಗಮಂಡಲ 120, ವಿರಾಜಪೇಟೆ ಕಸಬಾ 68.40, ಹುದಿಕೇರಿ 53.30, ಶ್ರೀಮಂಗಲ 59.40, ಪೊನ್ನಂಪೇಟೆ 50, ಅಮ್ಮತಿ 50, ಬಾಳೆಲೆ 1.40, ಸೋಮವಾರಪೇಟೆ ಕಸಬಾ 48.20, ಶನಿವಾರಸಂತೆ 23, ಶಾಂತಳ್ಳಿ 100.20, ಕೊಡ್ಲಿಪೇಟೆ 24, ಕುಶಾಲನಗರ 18.60, ಸುಂಟಿಕೊಪ್ಪ 26 ಮಿ.ಮೀ.ಮಳೆಯಾಗಿರುವುದು ಕಂಡು ಬಂದಿದೆ.
ಜಿಲ್ಲೆಯಲ್ಲಿ ಮಳೆ ಬಿರುಸು ಕಂಡ ಕಾರಣದಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಸದ್ಯ ಗರಿಷ್ಠ 2859 ಅಡಿಯ ಜಲಾಶಯದಲ್ಲಿ ನೀರಿನ ಮಟ್ಟ ಈಗ 2826.48 ಅಡಿಗೇರಿದೆ. ಕಳೆದ ವರ್ಷ ಇದೇ ದಿನ 2854.54 ಅಡಿಯಷ್ಟು ನೀರಿತ್ತು. ಇದೀಗ ಜಲಾಶಯಕ್ಕೆ 1557 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಕಳೆದ ವರ್ಷ ಇದೇ ದಿನ 12644ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಇದೀಗ ಜಲಾಶಯದಿಂದ 50 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದರೆ ಕಳೆದ ವರ್ಷ ಇದೇ ನದಿಗೆ 11940 ಕ್ಯುಸೆಕ್ ನೀರನ್ನು ಬಿಡಲಾಗುತ್ತಿತ್ತು.