ಕೊಡಗಿನಲ್ಲಿ ಜನಪ್ರಿಯವಾದ ರಿವರ್ ರಾಪ್ಟಿಂಗ್

Spread the love

ಕೊಡಗಿನಲ್ಲಿ ಜನಪ್ರಿಯವಾದ ರಿವರ್ ರಾಪ್ಟಿಂಗ್

ಕೊಡಗಿನಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ರಿವರ್ ರಾಪ್ಟಿಂಗ್ ಜನಪ್ರಿಯವಾಗುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಿವರ್ ರಾಪ್ಟಿಂಗ್ ಮಾಡಲು ಬರುತ್ತಿದ್ದಾರೆ. ಹೀಗಾಗಿ ಇದು ಆದಾಯ ತಂದುಕೊಡುವ ಕ್ರೀಡೆಯಾಗಿ ಗಮನಸೆಳೆಯುತ್ತಿದೆ.

ಈ ಬಾರಿಯ ಭಾರೀ ಮಳೆಗೆ ಕಾವೇರಿ ನದಿ ತುಂಬಿ ಹರಿದಿದ್ದು ಅದರಲ್ಲಿಯೇ ರಾಪ್ಟಿಂಗ್ ಮಾಡಲೇ ಬೇಕೆಂಬ ಹಂಬಲದೊಂದಿಗೆ ಜನಬರುತ್ತಿರುವುದು ಗೋಚರಿಸುತ್ತಿದೆ. ಸುರಿಯುವ ಮಳೆಗೆ ಮೈಯೊಡ್ಡಿ, ಉಕ್ಕಿಹರಿಯುವ ನದಿಯಲ್ಲಿ ತೇಲಾಡುತ್ತಾ… ಏಳುತ್ತಾ….ಬೀಳುತ್ತಾ…. ಸಾಗುವ ರ‍್ಯಾಫ್ಟಿಂಗ್‌ನ್ನು ದೂರದಿಂದ ನೋಡುವಾಗಲೇ ಮೈ ರೋಮಾಂಚನಗೊಳ್ಳುತ್ತದೆ. ಇನ್ನು ತಾವೇ ಕುಳಿತು ಸಾಗುವುದೆಂದರೆ ಅದು ಮರೆಯಲಾರದ ರಸಾನುಭವ.

ದಶಕಗಳ ಹಿಂದೆ ಮೊದಲ ಬಾರಿಗೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್ ದುಬಾರೆಯಲ್ಲಿ ರಿವರ್ ರಾಪ್ಟಿಂಗ್ ಆರಂಭಿಸಿದಾಗ ಇದಕ್ಕೆ ಜಂಗಲ್ ಲಾಡ್ಜ್‌ನ ಸಹಕಾರವೂ ದೊರೆತಿತ್ತು. ಆರಂಭದಲ್ಲಿ ಪ್ರಚಾರದ ಕೊರತೆ, ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅದು ನಡೆಯಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಇದು ಜನಪ್ರಿಯವಾಗತೊಡಗಿತು. ಮೊದಲ ವರ್ಷದಲ್ಲಿ ನೂರರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಂದಿ ಇತ್ತೀಚಿಗಿನ ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ದುಬಾರೆಯ ಆನೆ ಕ್ಯಾಂಪ್‌ಗೆ ಬರುವವರು ಹಾಗೆಯೇ ರಿವರ್ ರಾಪ್ಟಿಂಗ್ ನ ಮಜಾವನ್ನು ಕೂಡ ಪಡೆಯಬಹುದಾಗಿದೆ. ಇಲ್ಲಿನ ಆನೆ ಶಿಬಿರದಿಂದ ಪ್ರಾರಂಭವಾಗುವ ರಾಪ್ಟಿಂಗ್ ಹೊಸಪಟ್ಟಣ, ಗುಡ್ಡೆಹೊಸೂರು, ಕಾವೇರಿ ನಿಸರ್ಗಧಾಮದ ಮೂಲಕ ಸಾಗಿ ಪಾಲಿಟೆಕ್ನಿಕ್ ಬಳಿ ಅಂತ್ಯಗೊಳ್ಳುತ್ತದೆ. ಅಂದರೆ ಬರೋಬ್ಬರಿ ಹನ್ನೊಂದು ಕಿ.ಮೀ. ದೂರವನ್ನು ಉಕ್ಕಿಹರಿಯುವ ನದಿಯಲ್ಲಿ ಕ್ರಮಿಸುವುದೆಂದರೆ ಹುಡುಗಾಟದ ಮಾತಲ್ಲ ಇದಕ್ಕೆ ಧೈರ್ಯ ಬೇಕು. ರಾಫ್ಟೊಂದರಲ್ಲಿ ಆರು ಮಂದಿ ಒಮ್ಮೆಗೆ ಕುಳಿತು ರಾಪ್ಟಿಂಗ್ ಮಾಡಬಹುದಾಗಿದೆ. ರಾಪ್ಟಿಂಗ್ ಮಾಡುವ ಸಂದರ್ಭ ಜೊತೆಯಲ್ಲಿ ಪರಿಣಿತರು ಇರುವುದರಿಂದ ಭಯಪಡಬೇಕಾಗಿಲ್ಲ. ರಿವರ್ ರಾಪ್ಟಿಂಗ್ ಮಾಡುವವರಿಗೆ ಮೊದಲಿಗೆ ಜೀವರಕ್ಷಕ ಜಾಕೆಟ್ ತೊಡಿಸಲಾಗುತ್ತದೆ. ಜೊತೆಗೆ ಹೆಲ್ಮೆಟ್ ನೀಡಲಾಗುತ್ತದೆ. ಇಲ್ಲಿ ಪುರುಷರು, ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬಹುದಾಗಿದೆ.

ರಿವರ್ ರಾಪ್ಟಿಂಗ್ ಆರಂಭವಾದ ಬಳಿಕ ಮಳೆಗಾಲದಲ್ಲಿಯೂ ದುಬಾರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇದು ಪ್ರವಾಸೋದ್ಯಮದ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಮಳೆಗಾಲದ ವಿಶೇಷ ಕ್ರೀಡೆಯಾಗಿ ಗಮನ ಸೆಳೆಯುತ್ತಿರುವ “ರಿವರ್ ರಾಪ್ಟಿಂಗ್ ” ಮಳೆಗಾಲದ ಅಂತ್ಯದವರೆಗೂ ನಡೆಯುತ್ತದೆ. ದುಬಾರೆಯಲ್ಲಿ ಈಗಾಗಲೇ 35 ಮಂದಿ ಬೋಟ್ ಕಾರ್ಯನಿರ್ವಹಣೆ ಮಾಡುತ್ತಿದ್ದು, 74 ಬೋಟ್‌ಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಲಾಗಿದೆ. ಪ್ರತಿಯೊಬ್ಬರಿಗೆ 800 ರೂ. ಶುಲ್ಕ ವಿಧಿಸಲಾಗುತ್ತಿದೆ.

ಕೊಡಗಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ರೋಮಾಂಚನಕಾರಿ ಜಲಕ್ರೀಡೆಯಾದ ರಿವರ್ ರಾಪ್ಟಿಂಗ್‍ ನಲ್ಲಿ ಒಂದಷ್ಟು ಸುಧಾರಣೆಯನ್ನು ಜಿಲ್ಲಾಡಳಿತ ಮಾಡಿದೆ. ಈಗಾಗಲೇ ಕೊಡಗಿನ ದುಬಾರೆಯ ಕಾವೇರಿ ನದಿ ಹಾಗೂ ದಕ್ಷಿಣ ಕೊಡಗಿನ ಬರಪೊಳೆಯಲ್ಲಿ ರಿವರ್ ರಾಪ್ಟಿಂಗ್ ಅವಕಾಶ ಮಾಡಿಕೊಡಲಾಗಿದೆ.


Spread the love