ಕೊಡಗಿನಲ್ಲಿ ಬಿಜೆಪಿಯತ್ತ ಮುಖ ಮಾಡುತ್ತಿರುವ ಕೈ ಕಾರ್ಯಕರ್ತರು!

Spread the love

ಕೊಡಗಿನಲ್ಲಿ ಬಿಜೆಪಿಯತ್ತ ಮುಖ ಮಾಡುತ್ತಿರುವ ಕೈ ಕಾರ್ಯಕರ್ತರು!

ಮಡಿಕೇರಿ: ವಿಧಾನಸಭಾ ಚುನಾವಣೆಗೆ ಇನ್ನು ಐದಾರು ತಿಂಗಳಷ್ಟೆ ಬಾಕಿಯಿದ್ದು, ಕೊಡಗಿನಲ್ಲಿ ಅಖಾಡಕ್ಕಿಳಿದಿರುವ ಬಿಜೆಪಿ ಕಾಂಗ್ರೆಸ್ ನ್ನು ಮಣಿಸಲು ತಳಮಟ್ಟದಿಂದ ತಂತ್ರ ಆರಂಭಿಸಿದೆ. ಅದರ ಪರಿಣಾಮ ಗ್ರಾಮ ಪಂಚಾಯಿತಿ ಮಟ್ಟದ ನಾಯಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.

ಗ್ರಾಮೀಣ ಮಟ್ಟದಿಂದಲೇ ಕಾಂಗ್ರೆಸ್ ನನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಸೆಳೆಯುತ್ತಿದೆ. ಈ ನಡುವೆ ಮಡಿಕೇರಿ ವಿಧಾನಸಭಾ ವ್ಯಾಪ್ತಿಗೆ ಬರುವ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಾರು 200 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ದೊಡ್ಡ ಶಾಕ್ ನೀಡಿದೆ.

ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯ ತತ್ವ ಸಿದ್ದಾಂತ ಮೆಚ್ಚಿ ಕಾಂಗ್ರೆಸ್ ನ ಹೋಬಳಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಭುವನೇಂದ್ರ ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಬಿ.ಜೆ.ಪಿ. ಸೇರ್ಪಡೆಯಾಗಿದ್ದಾರೆ. ಇವರಿಗೆ ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಇದು ಆರಂಭವಾಗಿದ್ದು, ಇನ್ನು ಐದಾರು ತಿಂಗಳಲ್ಲಿ ಇನ್ನೆಷ್ಟು ನಾಯಕರು ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡುತ್ತಾರೋ ಗೊತ್ತಿಲ್ಲ. ಆದರೆ ಪಕ್ಷ ಸಂಘಟನೆಯತ್ತ ಮುಖ ಮಾಡದೆ ಕೇವಲ ಟಿಕೆಟ್ ಗಾಗಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ತಪ್ಪಿದಲ್ಲ.


Spread the love

Leave a Reply

Please enter your comment!
Please enter your name here