ಕೊಡಗಿನಲ್ಲಿ ಹುಲಿ ಕೊಂದವನು ಶೂರನಾಗುತ್ತಿದ್ದ!

Spread the love

ಕೊಡಗಿನಲ್ಲಿ ಹುಲಿ ಕೊಂದವನು ಶೂರನಾಗುತ್ತಿದ್ದ!

ಮಡಿಕೇರಿ: ಪ್ರತಿಯೊಂದು ಊರಿನಲ್ಲಿಯೂ ಒಂದೊಂದು ಆಚರಣೆಯಿದ್ದು ಅದು ಕಾಲಾಂತರದಲ್ಲಿ ಮರೆಯಾಗಿದೆ. ಇಂತಹ ಆಚರಣೆಗಳ ಪೈಕಿ ಕೊಡಗಿನಲ್ಲಿ ನಡೆಯುತ್ತಿದ್ದ ಹುಲಿ ಮದುವೆ ಒಂದಾಗಿದೆ. ಇದನ್ನು ಕೊಡವ ಭಾಷೆಯಲ್ಲಿ ನರಿಮಂಗಲ ಎಂದು ಕರೆಯಲಾಗುತ್ತಿದೆ.

ಕೊಡಗಿನಲ್ಲಿ ಹುಲಿಕೊಂದ ಶೂರರ ಬಗ್ಗೆ ಮಾತುಗಳಿವೆ. ಅವರು ಹುಲಿಯನ್ನು ಕೊಂದು ಅದರ ಮುಂದೆ ನಿಂತು ತೆಗೆಸಿದ ಚಿತ್ರಗಳು ಕೆಲವೆಡೆ ಕಾಣಸಿಗುತ್ತವೆ. ಇದು ಇವತ್ತಿನ ಕಥೆಯಲ್ಲ. ಹಿಂದಿನ ಕಾಲದಲ್ಲಿ ಕೃಷಿಯೇ ಬದುಕಾಗಿದ್ದ ಕಾಲದಲ್ಲಿಕೊಡಗು ದಟ್ಟ ಕಾಡುಗಳಿಂದ ಕೂಡಿತ್ತು. ಹೆಚ್ಚಿನ ಭೂ ಪ್ರದೇಶ ಬೆಟ್ಟಗುಡ್ಡ ಕಾಡುಗಳಿಂದ ಕೂಡಿತ್ತು. ತಾವು ಮಾಡಿದ ಕೃಷಿಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದು ಜತೆಗೆ ಜಾನುವಾರುಗಳ ಮೇಲೆ ದಾಳಿ ಮಾಡುವ ಮನುಷ್ಯನಿಗೆ ಕಂಟಕವಾಗಿದ್ದ ಹುಲಿಯನ್ನು ಕೊಲ್ಲ ಬೇಕಾಗಿತ್ತು. ಆದರೆ ಹುಲಿಯನ್ನು ಬೇಟೆಯಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕೆ ಶೂರತನ ಬೇಕಾಗುತ್ತಿತ್ತು.

ಕೋವಿಗಳ ಬಳಕೆ ಬಂದ ನಂತರ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸುವ ಹುಲಿಗಳನ್ನು ಬೇಟೆಯಾಡಿದ ವೀರನನ್ನು ಕೋವಿಯೊಂದಿಗೆ ಹುಲಿ ಜತೆ ನಿಲ್ಲಿಸಿ ಸನ್ಮಾನ ಮಾಡಲಾಗುತ್ತಿತ್ತು. ಕುಟುಂಬಸ್ಥರು, ಗ್ರಾಮಸ್ಥರೆಲ್ಲರೂ ಸತ್ತ ಹುಲಿಯನ್ನು ಸಿಂಗರಿಸಿ ಹೊತ್ತ ನಡೆದರೆ, ಹುಲಿಯನ್ನು ಬೇಟೆಯಾಡಿದಾತ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ಕೋವಿಯನ್ನು ಹೆಗಲ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಜೈಕಾರಗಳು ಮೊಳಗುತ್ತಿದ್ದವು, ಅಭಿನಂದರೆ, ಸನ್ಮಾನಗಳು ಸಲ್ಲುತ್ತಿದ್ದವು. ನಂತರ ಊರ್ ಮಂದ್(ಗ್ರಾಮದ ಮೈದಾನ)ನಲ್ಲಿ ಸನ್ಮಾನ ನಡೆಯುತ್ತಿದ್ದವಲ್ಲದೆ, ಊರವರಿಗೆಲ್ಲ ಬೋಜನ ನಡೆಯುತ್ತಿತ್ತು.

ಆ ನಂತರ ಹುಲಿಯನ್ನು ಕೊಂದ ಶೂರನಿಗೆ ಎಲ್ಲೆಡೆಯೂ ಗೌರವ, ಸನ್ಮಾನಗಳು ದೊರೆಯುತ್ತಿತ್ತು. ಕೆಲವೊಮ್ಮೆ ಕುಟುಂಬದ ಐನ್ ಮನೆ(ಕುಟುಂಬದ ಹಿರಿಯ ಮನೆ)ಯಲ್ಲಿಯೇ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇವತ್ತಿಗೂ ಕೊಡಗಿನ ಹಲವು ಕುಟುಂಬಗಳಲ್ಲಿ ಹುಲಿಯನ್ನು ಬೇಟೆಯಾಡಿ ಶೂರನೆನೆಸಿಕೊಂಡು ಕಾಲವಾದ ಹಿರಿಯರಿದ್ದಾರೆ. ಹಿಂದಿನ ಕಾಲದ ಶೂರತ್ವದ ಸಂಕೇತವಾಗಿದ್ದ ಹುಲಿಮದುವೆಯನ್ನು ಈಗ ನಿಷೇಧಿಸಲಾಗಿದೆ.


Spread the love

Leave a Reply

Please enter your comment!
Please enter your name here