
ಕೊಡಗಿನ ಹೋಂಸ್ಟೇನಲ್ಲಿ ಪ್ರವಾಸಿ ಯುವತಿ ಸಾವು
ಮಡಿಕೇರಿ: ಕೊಡಗಿನ ಪ್ರವಾಸಿ ತಾಣವನ್ನು ವೀಕ್ಷಿಸಲು ಆಗಮಿಸಿದ ಪ್ರವಾಸಿಗರ ತಂಡದಲ್ಲಿದ್ದ ಯುವತಿಯೊಬ್ಬಳು ತಾನು ಉಳಿದುಕೊಂಡಿದ್ದ ಹೋಂಸ್ಟೇನಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಹೋಂಸ್ಟೇ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿದೆ.
ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ ಬಳ್ಳಾರಿ ತೋರಣಗಲ್ ನಿವಾಸಿ ವಿಘ್ನೇಶ್ವರಿ ಈಶ್ವರನ್(24) ಮೃತಪಟ್ಟ ಯುವತಿ. ಎಂಬಿಎ ಓದಿದ್ದ ವಿಘ್ನೇಶ್ವರಿ ಕಳೆದ ಒಂಬತ್ತು ತಿಂಗಳಿನಿಂದ ಮುಂಬೈನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಸದಾ ಕೆಲಸದ ಒತ್ತಡದಲ್ಲಿದ್ದ ಆಕೆ ಒಂದಷ್ಟು ಸಮಯವನ್ನು ಪ್ರಕೃತಿ ನಡುವೆ ಕಳೆಯುವ ಸಲುವಾಗಿ ಪ್ರವಾಸ ಹೊರಟು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿದ್ದ ತನ್ನ ಇತರೆ ನಾಲ್ಕು ಮಂದಿ ಗೆಳತಿಯರ ಜೊತೆ ಶನಿವಾರ ಮಡಿಕೇರಿ ತಲುಪಿದ್ದರು. ಇವರು ನಗರದ ಅಗ್ನಿ ಶಾಮಕ ದಳದ ಕಚೇರಿ ಬಳಿ ಇರುವ ಕೂರ್ಗ್ ವ್ಯಾಲಿ ವ್ಯೂ ಹೋಮ್ ಸ್ಟೇ ನಲ್ಲಿ. ಆನ್ಲೈನ್ ಮೂಲಕ ಕೊಠಡಿ ಬುಕ್ ಮಾಡಿದ್ದರು. ಶನಿವಾರ ಮತ್ತು ಭಾನುವಾರ ಅಲ್ಲಿಯೇ ಉಳಿದು ಕೊಂಡು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಅಲ್ಲದೆ ಭಾನುವಾರ ರಾತ್ರಿ ಅಲ್ಲಿಯೇ ಉಳಿದು ಸೋಮವಾರ ಬೆಳಗ್ಗೆ ಹೋಂಸ್ಟೇಯನ್ನು ಖಾಲಿ ಮಾಡಿ ಜೀಪ್ನಲ್ಲಿ ಮಾಂದಲ್ ಪಟ್ಟಿಗೆ ತೆರಳಿ ಅಲ್ಲಿನ ಸುಂದರ ದೃಶ್ಯಗಳನ್ನು ನೋಡಿಕೊಂಡು ಹಿಂತಿರುಗಲು ಯೋಜನೆ ರೂಪಿಸಿದ್ದರು.
ಭಾನುವಾರ ರಾತ್ರಿ ವಿಘ್ನೇಶ್ವರಿ ಸ್ನಾನಕ್ಕೆಂದು ತಾವು ಉಳಿದುಕೊಂಡಿದ್ದ ಹೋಂಸ್ಟೇನ ಬಾತ್ ರೂಂಗೆ ತೆರಳಿದ್ದು, ಅಲ್ಲಿಂದ ಬಹಳ ಹೊತ್ತಾದರೂ ಹಿಂತಿರುಗಿರಲಿಲ್ಲ. ಹೀಗಾಗಿ ಗೆಳತಿಯರು ಹೋಗಿ ನೋಡಿದ್ದಾರೆ. ಈ ವೇಳೆ ಬಾತ್ ರೂಂನಿಂದ ಯಾವುದೇ ಶಬ್ದ ಬಾರದೆ ಇದ್ದಾಗ ಬಾಗಿಲು ತೆರೆದು ನೋಡಿದ್ದಾರೆ. ಆಗ ಒಳಗೆ ವಿಘ್ನೇಶ್ವರಿ ಕುಸಿದು ಬಿದ್ದಿರುವುದು ಕಾಣಿಸಿದ್ದು ತಕ್ಷಣವೇ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಆಕೆಯನ್ನು ವಾಹನದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಗರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಶವರ ಮಹಜರು ನಡೆಸಿ ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
ವಿಷಯ ತಿಳಿದು ಮೃತ ಯುವತಿಯ ತಂದೆ ಈಶ್ವರನ್ ಮಡಿಕೇರಿ ಆಗಮಿಸಿದ್ದು, ಅವರು ನೀಡಿದ ದೂರಿದ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ನನ್ನ ಮಗಳು ದೈಹಿಕವಾಗಿ ಆರೋಗ್ಯವಂತಳಾಗಿದ್ದು, ಯಾವುದೇ ರೀತಿಯ ಸಮಸ್ಯೆ ಆಕೆಗೆ ಇರಲಿಲ್ಲ. ಪ್ರವಾಸ ಹೋಗುತ್ತಿರುವ ವಿಚಾರವನ್ನು ನಮಗೆ ಮಾಹಿತಿ ನೀಡಿದ್ದಳು. ಹೋಂಸ್ಟೇಯಲ್ಲಿರುವ ಗ್ಯಾಸ್ ಗೀಸರ್ ಸಮಸ್ಯೆಯಿಂದ ಮಗಳು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ತಂದೆ ಈಶ್ವರನ್ ಹೇಳಿದ್ದಾರೆ. ಇನ್ನು ಕೂರ್ಗ್ ವ್ಯಾಲಿ ವ್ಯೂ ಹೋಮ್ ಸ್ಟೇ ನಡೆಸುವ ಮಾಲೀಕ ದುಬೈ ನಿವಾಸಿಯಾಗಿದ್ದು, ಈ ಹೋಮ್ ಸ್ಟೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರಲಿಲ್ಲ ಹೀಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಹೋಮ್ ಸ್ಟೇ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ಹೋಮ್ ಸ್ಟೇ ಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ