ಕೊಡಗು ಪತ್ರಿಕಾಭವನ ವಾರ್ಷಿಕೋತ್ಸವ ಕ್ರೀಡಾಕೂಟ

Spread the love

ಕೊಡಗು ಪತ್ರಿಕಾಭವನ ವಾರ್ಷಿಕೋತ್ಸವ ಕ್ರೀಡಾಕೂಟ

ಮಡಿಕೇರಿ: ಕೊಡಗು ಪತ್ರಿಕಾ ಭವನದ 21ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲೆಯ ಪತ್ರಕರ್ತರಿಗಾಗಿ ಆಯೋಜಿಸಲಾಗಿದ್ದ ಒಳಾಂಗಣ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ಕೊಡಗು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಕ್ರೀಡಾಕೂಟವನ್ನು ಕೊಡಗಿನ ಹಿರಿಯ ಚೆಸ್ ಆಟಗಾರರು ಮತ್ತು ತರಬೇತುದಾರರಾದ ಎನ್.ಟಿ.ಶಂಕರ ನಾರಾಯಣ ಅವರು ಚೆಸ್ ಆಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಚೆಸ್ ಕ್ರೀಡೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸ್ಥಾಪಿಸುವ ಆಟವಾಗಿದ್ದು, ಇದು ನಮ್ಮ ಜೀವನದ ಸವಾಲುಗಳನ್ನು ಎದುರಿಸಲು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರಲ್ಲದೆ, ಕೊಡಗು ರಾಜ್ಯವಾಗಿದ್ದ ಸಂದರ್ಭ ತಮ್ಮ ತಂದೆ ಕೂಡಾ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದು, ಪತ್ರಕರ್ತರಿಗಾಗಿ ಆಯೋಜಿಸಿರುವ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕಾ ಭವನ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಟಿ.ಪಿ.ರಮೇಶ್ ಅವರು ಮಾತನಾಡಿ, ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳವಕಾಶವಿಲ್ಲದಿದ್ದ ಸಂದರ್ಭದಲ್ಲಿ ಪತ್ರಕರ್ತರಿಗಾಗಿ ಸ್ವಂತ ಭವನವೊಂದನ್ನು 21 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಪತ್ರಕರ್ತರ ಮನರಂಜನೆಗಾಗಿ ಕ್ರೀಡಾಕೂಟಗಳನ್ನು ಹಾಗೂ ಕುಟುಂಬದವರ ಸಮ್ಮಿಲನವನ್ನು ಪ್ರತೀ ವರ್ಷ ಆಯೋಜಿಸಿಕೊಂಡು ಬರಲಾಗುತ್ತಿತ್ತು.

ಆದರೆ ಬದಲಾದ ಕಾಲಘಟ್ಟದಲ್ಲಿ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಚಟುವಟಿಕೆ ಮತ್ತೆ ಆರಂಭವಾಗಿರುವುದು ಸಂತಸ ತಂದಿದೆ. ಮುಂದಿನ ತಲೆಮಾರಿನ ಪತ್ರಕರ್ತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದೂರಾಲೋಚನೆಯಿಂದ ನಿರ್ಮಿಸಲಾಗಿರುವ ಈ ಭವನದಲ್ಲಿ ಪತ್ರಕರ್ತರಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸಲು ಅವಕಾಶವಿದ್ದು, ಇದನ್ನು ಕಿರಿಯ ಪತ್ರಕರ್ತರು ಉಪಯೋಗಿಸಿಕೊಳ್ಳುವುದರ ಜೊತೆಗೆ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ವಿ.ರವಿಕುಮಾರ್ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆ ಪತ್ರಕರ್ತರ ಕ್ರೀಡಾಕೂಟ, ಕುಟುಂಬದ ಸಮ್ಮಿಲನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದುದನ್ನು ಸ್ಮರಿಸಿಕೊಂಡರಲ್ಲದೆ, ಪ್ರಸಕ್ತ ಈ ಕಾರ್ಯಕ್ರಮ ಮತ್ತೆ ಆರಂಭಗೊಂಡಿರುವುದು ಪತ್ರಕರ್ತರಾದ ತಮಗೆಲ್ಲಾ ಉತ್ಸಾಹ ಮೂಡಿಸಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕಾ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್ ಅವರು ಪ್ರಾಸ್ತಾವಿಕ ನುಡಿಯಾಡಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಉಪಸ್ಥಿತರಿದ್ದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ, ಪುಟಾಣಿ ಮೌಲ್ಯ ಪ್ರಾರ್ಥಿಸಿದರು. ಕೋಶಾಧಿಕಾರಿ ಕೆ.ತಿಮ್ಮಪ್ಪ ವಂದಿಸಿದರು. ಪತ್ರಕರ್ತರಿಗಾಗಿ ಟೇಬಲ್ ಟೆನ್ನಿಸ್, ಕೇರಂ, ಚೆಸ್ ಮುಂತಾದ ಒಳಾಂಗಣ ಕ್ರೀಡೆಗಳನ್ನು ನಡೆಸಲಾಯಿತು. ವಿಜೇತರಿಗೆ ನವೆಂಬರ್ 5 ರಂದು ನಡೆಯಲಿರುವ ಪತ್ರಿಕಾ ಭವನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ.


Spread the love