
ಕೊಡೆ, ರೈನ್ ಕೋಟ್, ಕೃಷಿ ಉಪಕರಣ ಖರೀದಿಗೆ ಅವಕಾಶ ನೀಡಿ- ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಒತ್ತಾಯ
ಮಂಗಳೂರು: ಇನ್ನೆರಡು ದಿವಸಗಳಲ್ಲಿ ಕರಾವಳಿಗೆ ಮುಂಗಾರು ಪ್ರವೇಶ ಮಾಡಲಿದ್ದು, ಈಗಾಗಲೇ ಕರಾವಳಿಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿರುವುದರಿಂದ ಕೃಷಿ ಕೂಲಿ ಕಾರ್ಮಿಕರು, ರೈತರು ಮತ್ತು ಇನ್ನಿತರರಿಗೆ ಮಳೆಗಾಲದ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಜಿಲ್ಲಾಡಳಿತವು ಅವಕಾಶ ಮಾಡಿಕೊಡಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಒತ್ತಾಯಿಸುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಆರಂಭವಾಗಿದ್ದು, ಕೃಷಿಕರಿಗೆ ಬೇಕಾಗುವ ಬಿತ್ತನೆ ಬೀಜ, ಗೊಬ್ಬರ, ಇನ್ನಿತರ ಸಾಧನಗಳು, ಮೋಟಾರ್, ಟಿಲ್ಲರ್ ಇತ್ಯಾದಿ ಬಿಡಿ ಭಾಗಗಳು, ಪೈಪ್ ಮತ್ತು ಫಿಟ್ಟಿಂಗ್ ಇತ್ಯಾದಿ ಕಾಲ ಮೀತಿ ಇಲ್ಲದೆ ದೊರೆಯುವಂತಾಗಬೇಕು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶುಭೋದಯ ಆಳ್ವ ಒತ್ತಾಯಿಸಿದ್ದಾರೆ.
ಈಗಾಗಲೇ ಮಳೆಗಾಲ ಆರಂಭವಾಗಿದ್ದರೂ ಕೂಡ ಮಳೆಯಿಂದ ರಕ್ಷಣೆ ಪಡೆಯಲು ಕೊಡೆ, ರೈನ್ ಕೋಟ್, ಗೊರಬೆ ಇನ್ನಿತರ ಸಾಮಾಗ್ರಿಗಳ ಖರೀದಿಗೆ ಲಾಕ್ ಡೌನ್ ನಿಯಮ ಸಡಿಲ ಮಾಡಬೇಕು. ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕರು, ಬೈಕ್ ಸವಾರರಿಗೆ ಮಳೆಯಿಂದ ರಕ್ಷಣೆ ಪಡೆಯುವ ಸಾಮಾಗ್ರಿಗಳನ್ನು ಹೊಂದಿರುವುದು ಆರೋಗ್ಯ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ.ಕರಾವಳಿ, ಮಲೆನಾಡು ಜಿಲ್ಲೆಗಳ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು.
ಲಾಕ್ ಡೌನ್ ನಿಂದಾಗಿ ತರಕಾರಿಯಂತಹ ಆಹಾರ ಸಾಮಾಗ್ರಿ ಬೆಳೆಯುವ, ಹೂ ಹಣ್ಣು ಬೆಳೆಯುವ ರೈತರಿಗೆ ಉತ್ಪನ್ನಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ತಲುಪಿಸಲಾಗದೆ ನಷ್ಟ ಆಗಿದೆ.
ಗ್ರಾಮೀಣ ಪ್ರದೇಶದವರು, ಕೂಲಿ ಕಾರ್ಮಿಕರು ಮತ್ತು ಇತರ ಶ್ರಮಜೀವಿಗಳ ಹಿತದೃಷ್ಟಿ ಜಿಲ್ಲಾಡಳಿತ ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ ಮಾಡಬೇಕು. ಇನ್ನಷ್ಟು ದಿನಗಳ ಕಾಲ ಇದೇ ರೀತಿಯಲ್ಲಿ ಲಾಕ್ ಡೌನ್ ಕೆಲವು ದಿನಗಳ ಕಾಲ ಮುಂದುವರಿದರೆ ದುಡಿದು ತಿನ್ನುವ ಜನರಿಗೆ,ಸಣ್ಣ ವ್ಯಾಪಾರಿಗಳಿಗೆ, ಸ್ವಂತ ಪ್ರಮಾಣದ ಸ್ವಂತ ಉದ್ದಿಮೆದಾರರಿಗೆ ಜೀವನ ಇನ್ನಷ್ಟು ಕಠಿಣವಾಗಲಿದೆ ಎಂದವರು ಹೇಳಿದರು.
ಕೊರೊನಾ ಟಾಸ್ಕ್ ಫೋರ್ಸ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಟಾಸ್ಕ್ ಫೋರ್ಸುಗಳು ಕೊರೊನಾ ನಿಯಂತ್ರಣಕ್ಕಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಪರಿಶ್ರಮವನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಶ್ಲಾಘಿಸುತ್ತದೆ. ಸರಕಾರ ಇಂತಹ ಟಾಸ್ಕ್ ಫೋರ್ಸುಗಳಲ್ಲಿ ದುಡಿಯುತ್ತಿರುವ ಎಲ್ಲರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಆದೇಶ ನೀಡಬೇಕು. ಅದೇ ರೀತಿ ಈ ಸಮಿತಿಗಳಲ್ಲಿ ಪ್ರಮುಖ ಪಾತ್ರವಹಿಸುವ ಆಶಾ ಕಾರ್ಯಕರ್ತೆಯರಿಗೆ ಮತ್ತು ಶಿಕ್ಷಕರಿಗೆ ಸಕಾಲದಲ್ಲಿ ವೇತನ ಬಟವಾಡೆ ಮಾಡಬೇಕು.
ಕೋವಿಡ್-19ಸೋಂಕು ಎರಡನೇ ಅಲೆಯ ನಿಯಂತ್ರಣ ಮಾಡುವಲ್ಲಿ ಸರಕಾರ ಹಲವು ಕಾರಣಗಳಿಂದ ವಿಫಲವಾಗಿದ್ದು, ಸೋಂಕು ನಿವಾರಣೆಗಾಗಿ ಹೇರಲಾದ ಲಾಕ್ ಡೌನ್ ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಲಾಕ್ ಡೌನ್ ನಿಯಮಗಳಿಂದ ದುಡಿದು ಸಂಪಾದಿಸಿ ಜೀವನ ನಡೆಸುವ ಅಸೌಂಖ್ಯತ ಮಂದಿ ಜೀವನೋಪಾಯ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 33 ದಿವಸಗಳನ್ನು ಪೂರೈಸಿರುವ ಲಾಕ್ ಡೌನ್ ನಿಯಮಗಳನ್ನು ಮುಂದಿನ ವಾರದಿಂದ ಸಡಿಲಗೊಳಿಸಬೇಕಾಗಿ ವಿನಂತಿಸುತ್ತೇವೆ.
ಸೋಂಕು ಹರಡುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕೊರೊನಾ, ಶಿಲೀಂಧ್ರ ಸೋಂಕು ಹಾಗೂ ಮೂರನೇ ಅಲೆಯನ್ನು ಎದುರಿಸಲು ಜನರು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಸರಕಾರ ಮುಂದಾಬೇಕು.
ಜನರು ಗುಂಪು ಗೂಡಲು ಆಸ್ಪದ ನೀಡಬಾರದು. ಲಸಿಕಾ ಕೇಂದ್ರ, ಕೋವಿದ್ ಟೆಸ್ಟ್ ಸೆಂಟರ್, ದಿನಸಿ ಅಂಗಡಿ, ಪಡಿತರ ಅಂಗಡಿ,ತರಕಾರಿ ಮಾರುಕಟ್ಟೆಗಳಲ್ಲಿ ಜನ ಸಂದಣಿ ಆಗದಂತೆ ಖರೀದಿಗೆ ಹೆಚ್ಚು ಕಾಲಾವಕಾಶ ನೀಡಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳನ್ನು ಬೆಳಗ್ಗೆ 9 ಗಂಟೆಗೆ ಬಂದ್ ಮಾಡಿಸುತ್ತಿರುವ ಮಾಹಿತಿಗಳು ಬಂದಿದ್ದು, ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜನರಿಗೆ ಪಡಿತರ ಸಾಮಾಗ್ರಿ ಯಾವುದೇ ಸಮಸ್ಯೆ ಇಲ್ಲದೆ ದೊರೆಯುವಂತಾಗಬೇಕು.