
ಕೊನೆಯ ಚುನಾವಣೆಯಲ್ಲಿ ಸೋಲಿಸಬೇಡಿ: ವಿನಯಕುಮಾರ್ ಸೊರಕೆ ಮನವಿ
ಕಾಪು: ‘ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಈ ಬಾರಿ ನನ್ನನ್ನು ಸೋಲಿಸಿ ನಿವೃತ್ತಿ ಮಾಡಬೇಡಿ. ಜನಸೇವೆ ಮಾಡಲು 5 ವರ್ಷ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ’ ಎಂದು ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಹೇಳಿದರು.
ಕಾಪುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕಳೆದ ಬಾರಿಯೇ ನಾನು ಕಡೆಯ ಚುನಾವಣೆ ಎಂದು ಘೋಷಣೆ ಮಾಡಿದ್ದೆ. ಆದರೆ, ವಿರೋಧ ಪಕ್ಷಗಳ ಅಪಪ್ರಚಾರದಿಂದ ಸೋಲಾಯಿತು. ಸೋತರೂ ಐದು ವರ್ಷ ಕ್ಷೇತ್ರದ ಜನರ ಜೊತೆ ನಿಕಟ ಸಂಪರ್ಕದಿಂದ ಇದ್ದೆ. ಎಲ್ಲರ ಬೆಂಬಲದೊಂದಿಗೆ ಮತ್ತೊಮ್ಮೆ ಸರ್ವಾನುಮತದಿಂದ ಅಭ್ಯರ್ಥಿಯಾಗಿದ್ದೇನೆ’ ಎಂದರು.
‘ಕಾಂಗ್ರೆಸ್ ಪಕ್ಷದ ಪ್ರಥಮ ಪಟ್ಟಿಯಲ್ಲಿಯೇ ನನಗೆ ಅವಕಾಶ ನೀಡಿದೆ. ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಫಲಕ್ಕೆ ಕಾಂಗ್ರೆಸ್ ಹೈಕಮಾಂಡ್ ಮನ್ನಣೆ ನೀಡಿದೆ. ಶಾಸಕನಾಗಿ, ಸಂಸದನಾಗಿ, ಸಚಿವನಾಗಿ ನನಗೆ ಪಕ್ಷವು ಅನೇಕ ಅವಕಾಶ ಕೊಟ್ಟಿದೆ’ ಎಂದು ಹೇಳಿದರು.
‘ಚುನಾವಣೆ ಘೋಷಣೆ ಮೊದಲೇ ನಮ್ಮ ಕೆಲಸ ಕಾರ್ಯವನ್ನು ಮಾಡಿದ್ದೇವೆ. 130 ಬೂತ್‌ಗಳಲ್ಲಿ ಸಭೆಯನ್ನು ನಡೆಸಲಾಗಿದೆ. ಪಕ್ಷದ ನಾಲ್ಕು ಪ್ರಮುಖ ಆಶ್ವಾಸನೆಯ ‘ಗ್ಯಾರಂಟಿ ಕಾರ್ಡ್’ ಅನ್ನು ಮನೆ ಮನೆಗೆ ತಲುಪಿಸಲಾಗಿದೆ. ಚುನಾವಣೆ ಘೋಷಣೆಯಾದ ಬಳಿಕ ಮತ್ತೆ ಬೂತ್ ಮಟ್ಟದಲ್ಲಿ ಪ್ರತಿ ಮನೆಯನ್ನು ತಲುಪಲು ನಮ್ಮ ಕಾರ್ಯಕರ್ತರು ತಯಾರಾಗಿದ್ದಾರೆ. ಈ ಚುನಾವಣೆ ಮೋದಿಯವರ ಚುನಾವಣೆ ಅಲ್ಲ. ಜನರು ಈ ಭಾರಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ’ ಎಂದರು.
ಸಮಗ್ರ ಅಭಿವೃದ್ಧಿ: ‘ಕಾಪುವಿಗೆ ಎಲ್ಲ ಮೂಲ ಸೌಕರ್ಯಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಈಗಿನ ಶಾಸಕರು ತಮ್ಮದೇ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ನಾನು ಮತ್ತೆ ಶಾಸಕನಾಗಿ ಆಯ್ಕೆಯಾದರೆ ಕಾಪುವಿಗೆ ಬೇಕಾದಂತಹ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಸರ್ಕಾರಿ ಕಚೇರಿಗಳ ಸಂಕೀರ್ಣ, ಎಲ್ಲಾ ಗ್ರಾಮಗಳನ್ನು ಸಂಪರ್ಕಿಸುವ ಬಸ್ ನಿಲ್ದಾಣ ಮುಂತಾದ ಹಲವು ಯೋಜನೆಗಳು, ಪ್ರವಾಸೋದ್ಯಮ ಅಭಿವೃದ್ಧಿ ಸಹಿತ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಪ್ರಣಾಳಿಕೆಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದರು.
‘ಕಾಪುವಿನಲ್ಲಿ ಪ್ರಾಧಿಕಾರದಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದ ಬಿಜೆಪಿ, ಶಾಸಕರಾಗಿ ಆಯ್ಕೆಯಾದ ಬಳಿಕ ಪಟ್ಟಣದ ಅಭಿವೃದ್ಧಿಗೆ ಪ್ರಾಧಿಕಾರ ಬೇಕು ಎನ್ನುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಾಪುವಿನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲಾಗಲಿಲ್ಲ’ ಎಂದು ದೂರಿದರು.
‘ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಸಮಾಜದ ವಿವಿಧ ಜಾತಿಗಳ ನಿಗಮಗಳನ್ನು ಸ್ಥಾಪಿಸುವ ಯೋಚನೆ ಇದೆ’ ಎಂದು ಅವರು ತಿಳಿಸಿದರು.