ಕೊರಗರ ಮೇಲಿನ‌ ಪೊಲೀಸ್ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ: ಗೃಹ ಸಚಿವ ಅರಗ ಜ್ಞಾನೇಂದ್ರ

Spread the love

ಕೊರಗರ ಮೇಲಿನ‌ ಪೊಲೀಸ್ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ: ಗೃಹ ಸಚಿವ ಅರಗ ಜ್ಞಾನೇಂದ್ರ

ಕುಂದಾಪುರ: ಕೊರಗರ ಮೇಲಾದ ದೌರ್ಜನ್ಯ ನನಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಪೊಲೀಸರ ಅತಿರೇಕದ ವರ್ತನೆ ಮನಸ್ಸಿಗೆ ಬೇಸರ ತಂದಿದೆ. ಮನುಷ್ಯತ್ವವೇ ಕಳೆದುಕೊಂಡು ಕೊರಗರ ಮೇಲೆ ಹಲ್ಲೆ ನಡೆಸಲಾಗಿದೆ. ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ಎರಡೂ ಪ್ರಕರಣವನ್ನು ಸಿಓಡಿ ಗೆ ವಹಿಸುವೆ. ಅಲ್ಲದೇ ಹಲ್ಲೆಗೊಳಗಾದ ಆರು ಮಂದಿಗೆ ತಲಾ ಎರಡು ಲಕ್ಷ ರೂ ಹಣವನ್ನು ಹಸ್ತಾಂತರಿಸುತ್ತೇವೆ. ಮೊದಲ‌ ಹಂತದ ಐವತ್ತು ಸಾವಿರ ಚೆಕ್ ಅನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದ್ದೇನೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಶನಿವಾರ ಕೋಟತಟ್ಟು ಗ್ರಾ.ಪಂ‌ ವ್ಯಾಪ್ತಿಯ ಕೊರಗ‌ ಕಾಲನಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೊಂದಿಗೆ ಭೇಟಿ‌ ನೀಡಿ ಕೊರಗರಿಗೆ ಧೈರ್ಯ ತುಂಬಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇದನ್ನೂ ಓದಿ :  ಅಮಾನತು ಮಾಡಿದರೆ ಸಾಲದು, ಸೇವೆಯಿಂದಲೇ ವಜಾಗೊಳಿಸಿ – ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ಆಗ್ರಹ

ಎಲ್ಲಾ ಸಮುದಾಯವರು ಅವರವರ ರಕ್ಷಣೆ ಮಾಡಿಕೊಳ್ಳುತ್ತಾರೆ. ಆದರೆ ಕೊರಗರಿಗೆ ಅವರ ರಕ್ಷಣೆ ಮಾಡಿಕೊಳ್ಳುವ ತಾಕತ್ತು ಇರುವುದಿಲ್ಲ. ಹೀಗಾಗಿ ನಾನೇ ನೇರವಾಗಿ ಬಂದು ಅವರೆಲ್ಲರಿಗೂ ಧೈರ್ಯ ತುಂಬಿದ್ದೇನೆ. ಪೊಲೀಸ್ ದೌರ್ಜನ್ಯದ ಬಳಿಕ ಕೊರಗ ಕೇರಿಯ ನಿವಾಸಿಗಳು ಧೈರ್ಯ ಕಳೆದುಕೊಂಡಿದ್ದು, ಭಯಭೀತರಾಗಿದ್ದಾರೆ. ಕೊರಗ ಬಂಧುಗಳು ನಮಗಿನ್ಯಾರು ಎಂದು ಕೇಳುವ ಅವಶ್ಯಕತೆ ಇಲ್ಲ. ಅವರೊಂದಿಗೆ ನಾನಿದ್ದೇನೆ, ಸಚಿವರಿದ್ದಾರೆ, ನಮ್ಮ ಸರ್ಕಾರವಿದೆ. ಕೊರಗರ‌ ಮೇಲೆ ದೌರ್ಜನ್ಯವೆಸಗಿದ ಪೊಲೀಸರು ಸರಿಯಾದ ಬೆಲೆ ತೆರುತ್ತಾರೆ ಎಂದರು.

ಇದನ್ನೂ ಓದಿ : ಕುಂದಾಪುರ ಕೊರಗ ಸಮುದಾಯದ ಮೇಲಿನ ಪೊಲೀಸ್ ಪ್ರಕರಣ ಯೋಜಿತ ಸಂಚು: ಸಿದ್ದರಾಮಯ್ಯ

ಕೊರಗರೊಂದಿಗೆ ಮೂಟೆ ಹೊತ್ತಿದ್ದೆ:
ಕೊರಗ ಜನಾಂಗದವರು ನನ್ನೂರಲ್ಲೂ ಇದ್ದಾರೆ. ನಾನು ಅವರ ಜೊತೆಜೊತೆಗೆ ಬದುಕಿದವನು. ಹಿಂದೆ ನಾನು ರೈಸ್ ಮಿಲ್ ನಲ್ಲಿ ಕೆಲಸ‌ ಮಾಡುತ್ತಿದ್ದಾಗ ಕೊರಗರು ಹಮಾಲಿ‌ ಮಾಡುತ್ತಿದ್ದರು. ನಾನು ಅವರಿಗೆ ಮೂಟೆ ಹೊರಿಸುತ್ತಿದೆ. ಕೆಲವು ಸಂದರ್ಭಗಳಲ್ಲಿ ಅವರೊಂದಿಗೆ ನಾನೂ ಮೂಟೆ ಹೊತ್ತಿದ್ದೆ. ಕೊರಗ ಜನಾಂಗದವರು ಹೇಗೆ ಎನ್ನುವುದನ್ನು ಬಹಳ ಹತ್ತಿರದಿಂದಲೇ ನೋಡಿದ್ದೇನೆ. ಇಂತಹ ಮುಗ್ಧ ಜನರು ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದ್ದೆ ನನಗೆ ಆಶ್ಚರ್ಯ ಅನ್ನಿಸಿತು.

ಇದನ್ನೂ ಓದಿ : ಕೋಟತಟ್ಟು ಮೆಹಂದಿ‌ ಪ್ರಕರಣ: ಕೊರಗ‌ ಸಮುದಾಯದವರೂ ಸೇರಿದಂತೆ ಏಳು ಮಂದಿಯ ವಿರುದ್ದ ದೂರು ನೀಡಿದ ಪೊಲೀಸ್ ಸಿಬ್ಬಂದಿ

ಇದನ್ನೂ ಓದಿ : ವ್ಯವಸ್ಥೆಯ ಬಗ್ಗೆ ಕ್ಷಮೆ ಕೇಳುವೆ: ಕೊರಗರ ಮೇಲಿನ ಹಲ್ಲೆಯ ಕುರಿತು ಶಾಸಕ ಹಾಲಾಡಿ ಖೇದ

ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯೋರು ಯಾರು?!:
ಉದ್ದೇಶಪೂರ್ವಕವಾಗಿಯೇ ಕೊರಗ ಜನಾಂಗದವರ‌ ಮೇಲೆ ಕೇಸು ದಾಖಲಾಸಲಾಗಿದೆ. ಮೂರು ದಿನಗಳ ಬಳಿಕ ಕಾನ್ಸ್ ಟೇಬಲ್ ಹೋಗಿ ದೌರ್ಜನ್ಯಕ್ಕೊಳಗಾದ ಕೊರಗರ ಮೇಲೆಯೇ ಪ್ರತಿದೂರು ಕೊಡುತ್ತಾರೆ. ಇದು ಸುಳ್ಳು ಎಂದು ಎಲ್ಲರಿಗೂ ತಿಳಿಯುತ್ತದೆ. ಈ ರೀತಿ ಒಬ್ಬ ಪೊಲೀಸ್ ಸುಳ್ಳು ಕೇಸು ದಾಖಲಿಸುವುದು ಬಹಳ‌ ದೊಡ್ಡ ಅಪರಾಧ. ಹಲ್ಲೆ ಮಾಡಿದ ದಿನ ಪಿಎಸ್ಐ ಮೇಲಾಧಿಕಾರಿಗಳಿಗೆ‌ ತಿಳಿಸಿಲ್ಲ. ಠಾಣಾ ವ್ಯಾಪ್ತಿಯಲ್ಲಿ ಏನೇ ನಡೆದರೂ ಮೇಲಾಧಿಕಾರಿಗಳಿಗೆ ತಕ್ಷಣವೇ ರಿಪೋರ್ಟ್ ಮಾಡಬೇಕು. ಆದರೆ ಕೋಟ ಪಿಎಸ್ಐ ಮೇಲಾಧಿಕಾರಿಗಳಿಗೆ‌ ಮಾಹಿತಿ ನೀಡದೆ ದಾಷ್ಟ್ಯ ಮೆರೆದಿದ್ದಾರೆ. ರೌಡಿಗಳನ್ನು ನಿಯಂತ್ರಿಸಲು ಪೊಲೀಸರನ್ನು ನೇಮಿಸುತ್ತೇವೆ. ಪೊಲೀಸರೇ ರೌಡಿ ಕೆಲಸ‌ ಮಾಡಿದರೆ ಹೇಗಾಗುತ್ತದೆ. ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಮಾತು ತರುವ ಸಂದರ್ಭ ಇದಾಗಿದೆ. ನಮ್ಮ‌ರಕ್ಷಣೆಗಾಗಿ ಒಂದು‌ ಲಕ್ಷ ಪೊಲೀಸರು ರಾಜ್ಯದಲ್ಲಿ ಕೆಲಸ‌ ನಿರ್ವಹಿಸುತ್ತಿದ್ದಾರೆ. ಇಂತಹ ಘಟನೆಯಿಂದಾಗಿ ಅವರೆಲ್ಲರಿಗೂ ಅವಮಾನ ಮಾಡಿದಂತಾಗಿದೆ ಎಂದರು.

ಇದನ್ನೂ ಓದಿ : ಎಲ್ಲವೂ ಮರೆತು ನೆಮ್ಮದಿಯಿಂದಿರಿ. ಸರ್ಕಾರ ನಿಮ್ಮ‌ಜೊತೆಗಿದೆ: ಸಚಿವ ಕೋಟ ಅಭಯ

ಕ್ರಮ ಕೈಗೊಂಡಿದ್ದೇವೆ:
ಈಗಾಗಲೇ ದೌರ್ಜನ್ಯವೆಸಗಿದ ಪಿಎಸ್ಐ ಸಂತೋಷ್ ಅವರನ್ನು ಅಮಾನತು ಮಾಡಲಾಗಿದೆ. ಏಳು‌ ಮಂದಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದೇವೆ. ಸರ್ಕಾರಕ್ಕೆ ಬದ್ದತೆ ಇದೆ. ಅತ್ಯಂತ ಕೆಳಸ್ತರದ ವ್ಯಕ್ತಿಗಳ ಪ್ರಾಣ, ಆಸ್ತಿ‌ ರಕ್ಷಣೆಗೆ ಸರ್ಕಾರವಿದೆ. ಕೊರಗ ಮುಖ.ಮಡರು ಅನೇಕ ವಿಚಾರಗಳನ್ನು ನನ್ನ‌ ಮುಂದಿಟ್ಟಿದ್ದಾರೆ. ಅದನ್ನೆಲ್ಲಾ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಇದು ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆ. ಪುನರಪಿ‌ ಇಂತಹ ಘಟನೆಗಳು‌ ನಡೆಯದ ಹಾಗೆ ಎಚ್ಚರ ವಹಿಸುತ್ತೇವೆ. ಸುಳ್ಳು ಕೇಸ್ ವಿರುದ್ದ ಏನೂ ತೊಂದರೆಗಳಾಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ : ಸಂತ್ರಸ್ತ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಭಾಗಿ

ಮದುಮಕ್ಕಳಿಗೆ ಗೃಹ ಸಚಿವರಿಂದ ಶುಭ ಹಾರೈಕೆ:
ಗೃಹ ಸಚಿವ ಅರಗ ಜ್ಞಾನೇಂದ್ರ ಕೊರಗರ ಅಹವಾಲು ಆಲಿಸಿ ಪರಿಹಾರ ಘೋಷಿಸಿದ ಬಳಿಕ ವಧುವರ ಶಿಲ್ಪಾ ಹಾಗೂ ರಾಜೇಶ್ ಅವರಿಗೆ ಶಾಲು ಹೊದಿಸಿ ಶುಭ ಹಾರೈಸಿ ಸಿಹಿ ತಿಂಡಿ ನೀಡಿದರು. ಈ ವೇಳೆಯಲ್ಲಿ ಸಮಾಜಕಲ್ಯಾಣ ಸಚವ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.

ಇದನ್ನೂ ಓದಿ : ಕೊರಗರ ಮೇಲೆ ದಾಳಿ: ಕೋಟ ಎಸ್ಐ ಅಮಾನತು

ಗೃಹ ಸಚಿವರು ಬಂದು ಹೋದ ಬಳಿಕವೂ ಈ ಪ್ರಕರಣ ಮತ್ತೆ ಮುಂದುವರೆಯುವ ಸಾಧ್ಯತೆಗಳಿವೆ. ಹೀಗಾಗಿ ಸೋಮವಾರ ನಾವೆಲ್ಲರೂ ಸೇರಿ ಜಿಲ್ಲಾ‌ ಮಟ್ಟದಲ್ಲಿ‌ ಬೃಹತ್ ಜಾಥಾ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಕೊಡಲಿದ್ದೇವೆ. ನಮ್ಮ ವಿರುದ್ದ ಹಾಕಿರುವ ಸುಳ್ಳು ಕೇಸನ್ನು ವಾಪಾಸ್ ಪಡೆಯಬೇಕು ಅಲ್ಲದೇ ದೂರು ಕೊಟ್ಟ ಸಿಬ್ಬದಿಯನ್ನು ಅಮಾನತುಗೊಳಿಸಬೇಕು. ಒಂದು ವಾರದೊಳಗೆ ಬಿ ರಿಪೋರ್ಟ್ ಹಾಕದಿದ್ದರೆ ನಿರಂತರವಾಗಿ ಡಿಸಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಕೊರಗ ಮುಖಂಡ ಗಣೇಶ ಕೊರಗ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ‌ ಮುಖಂಡ ಕಿರಣ್ ಕೊಡ್ಗಿ, ಜಿಲ್ಲಾಧಿಕಾರಿ‌ ಕೂರ್ಮರಾವ್, ಜಿಲ್ಲಾ ಪೊಲಿಒಸ್ ವರಿಷ್ಠಾಧಿಕಾರಿ‌ ವಿಷ್ಣುವರ್ಧನ್ ಇದ್ದರು.


Spread the love