ಕೊರಗ ಸಮುದಾಯದವರು ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ – ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ

Spread the love

ಕೊರಗ ಸಮುದಾಯದವರು ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ – ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ

ಕುಂದಾಪುರ: ಕೊರಗ ಸಮುದಾಯದವರು ಪ್ರಕೃತಿಯ ಜೊತೆಗೆ ಬದುಕುವವರು. ಅವರಿಗೆ ಭೂಮಿ ನೀಡಿದರೆ ಅವರ ಬದುಕು ಸುಧಾರಿಸುವ ಜೊತೆ ಭೂಮಿಯನದ್ನೂ ಅಭಿವೃದ್ದಿಪಡಿಸುತ್ತಾರೆ. ಭೂಮಿ ಹಬ್ಬ ಆಚರಣೆಯ ಮೂಲಕ ಕೊರಗ ಸಮುದಾಯದ ಆಚರಣೆಗಳು, ಸಂಸ್ಕೃತಿ, ಸಂಸ್ಕಾರಗಳನ್ನು ಪರಿಚಯ ಮಾಡುವ ಜೊತೆಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತಿರುವುದು ಅತ್ಯಂತ ಸುತ್ಯರ್ಹ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು.

ಕುಂದಾಪುರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಕರ್ನಾಟಕ ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಗುರುವಾರ ಜರುಗಿದ 14ನೇ ವರ್ಷದ ಭೂಮಿ ಹಬ್ಬವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಡೋಲು ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೇವಲ ಇಲಾಖೆಯ ಅಧಿಕಾರಿಗಳಿಂದ ಮಾತ್ರ ಯಾವುದೇ ಅಭಿವೃಧ್ಧಿ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಯೋಜನೆಯ ಯಶಸ್ವಿಗೆ ಸಾಮೂಹಿಕ ಸಹಕಾರ ಹಾಗೂ ಸಹಭಾಗಿತ್ವ ಅತ್ಯಗತ್ಯ. ಸಮಾಜದ ಕಟ್ಟ ಕಡೆಯ ಜನರಿಗೂ ಬದುಕು ಸುಧಾರಿಸಬೇಕು ಎನ್ನುವ ಉದ್ದೇಶದಿಂದ ಕೊರಗ ಸಮಾಜ ಸಹಭಾಗಿತ್ವದಲ್ಲಿ ಅವರ ಜೀವನ ಮಟ್ಟ ಸುಧಾರಿಸಲು ಮುಂದಡಿ ಇಡಲಾಗುತ್ತದೆ ಎಂದರು.

ಕೊರಗ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಶೇ.90ರಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಿದ್ದಾರೆ. ಶೈಕ್ಷಣಿಕ ವರ್ಷದಲ್ಲಿ ಕೊರಗ ಸಮಾಜದ ಕಾಲನಿಯಲ್ಲಿಯೇ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳುವ ಪದ್ದತಿ ಆರಂಭಿಸಲಾಗಿದೆ. ಶೈಕ್ಷಣಿಕ, ಆರ್ಥಿಕ, ಹೈನುಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರದ ಹಲವಾರು ಯೋಜನೆಗಳಿದ್ದು, ಇವುಗಳ ಮಾಹಿತಿ ಪಡೆದುಕೊಂಡು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುಬೇಕು. ಕೊರಗ ಸಮಾಜದ ಬೇಡಿಕೆ ಏನಿದೆ, ಅದನ್ನು ಹೇಗೆ ಈಡೇರಿಸಲು ಸಾಧ್ಯ ಎನ್ನುವ ಬಗ್ಗೆ ಯೋಚನೆ ನಡೆಸಿ, ಕ್ರಿಯಾ ಯೋಜನೆ ಸಿದ್ದಪಡಿಸುವಾಗ ಕೂಡಾ ಸಮಾಜದ ಪ್ರಮುಖರೊಂದಿಗೆ ಚರ್ಚೆಸಿ, ಸಲಹೆ ಪಡೆದುಕೊಂಡು ಬೇಡಿಕೆಗೆ ಅನುಗುಣವಾಗಿ ಮಾಡಬೇಕು ಎನ್ನುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಕೊರಗ ಸಮಾಜದ ಪ್ರತಿಯೊಬ್ಬರಿಗೂ ಮನೆ ಇರಬೇಕು ಎನ್ನುವುದಕ್ಕಾಗಿ ಮನೆ ಇಲ್ಲದವರಿಗೆ ಐಟಿಡಿಪಿ ಇಲಾಖೆಯ ಮೂಲಕ ಮನೆ ನೀಡಲಾಗುತ್ತಿದ್ದು, ಸಮಾಜ ಬಂಧುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭೂಮಿ ಹಬ್ಬದ ಪುರ ಮೆರವಣಿಗೆ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರಗ ಸಮಾಜ ಹಿರಿಯ ಮಹಿಳೆ ಜ್ಯೋತಿ ಕೊರಗ ಭೂಮಿ ಹಬ್ಬದ ಜ್ಯೋತಿ ಬೆಳಗಿದರು. ಕೊರಗ ಸಮಾಜದ ಸಂಪ್ರದಾಯದಂತೆ ಬೇಬಿ ವಂಡ್ಸೆ ಮತ್ತು ಗಿರಿಜಾ ಜನ್ನಾಡಿ ಜೇನು ಹಂಚಿದರು.

ಕೊರಗ ಸಂಘಗಳ ಒಕ್ಕೂಟ ಅಧ್ಯಕ್ಷೆ ಬೆಳ್ವೆ ಅಮ್ಮಣ್ಣಿ ಕೊರಗ, ಉಡುಪಿ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಧಿಕಾರಿ ದೂದ್‍ಪೀರ್, ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ ವಿ., ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವರ್ಣೇಕರ್, ಕೊರಗ ಸಮಾಜದ ಪ್ರಥಮ ಪಿಹೆಚ್ ಡಿ ಪದವಿ ಪಡೆದ ಮಹಿಳೆ ಸಬಿತಾ ಗುಂಡ್ಮಿ, ಕುಂದಾಪುರ ನಗರ ಕೊರಗ ಅಭಿವೃದ್ಧಿ ಸಂಘ ಅಧ್ಯಕ್ಷ ಶೇಖರ ಕೊರಗ, ಜಿಲ್ಲಾ ಕೊರಗ ಸಮಿತಿ ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಶೋಭಾ ಬಂಟ್ವಾಳ, ಸಮಾಜದ ಹಿರಿಯ ಮಹಿಳೆ ಗೌರಿ ಕೊರಗ, ಮುಖಂಡರಾದ ಮತ್ತಾಡಿ ಕಾಯರಪಲ್ಕೆ, ಸುಶೀಲಾ ನಾಡ ಇದ್ದರು.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೊರಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭೂಮಿ ಹಬ್ಬದ ನಿಮಿತ್ತ ಕೊರಗ ಸಮಾಜದ ವಿವಿಧ ತಂಡಗಳಿಂದ ಡೋಲು, ಚಂಡೆ, ಕೊಳಲು ವಾದನ ಮತ್ತು ಡೊಳ್ಳು ಕುಣಿತ ನಡೆಯಿತು.

ಕೊರಗ ಸಂಘಗಳ ಒಕ್ಕೂಟ ಕಾರ್ಯದರ್ಶಿ ಪುತ್ರನ್ ಹೆಬ್ರಿ ಪ್ರಾಸ್ತಾವಿಕ ಮಾತನಾಡಿದರು, ಸುನಂದ ಮತ್ತು ತಂಡ ದ್ಯೇಯಗೀತೆ ಹಾಡಿದರು, ಕುಮಾರಿ ಸುಚಿತ್ರಾ ಧನ್ಯವಾದವಿತ್ತರು. ಸುರೇಂದ್ರ ಕಳ್ತೂರು ಹಾಗೂ ವಿಮಲಾ ಕಳ್ತೂರು ನಿರೂಪಿಸಿದರು.


Spread the love