
ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಕೋಟ ಪೊಲೀಸರಿಂದ ದಾಂಧಲೆ!
- ಡಿಜೆ ಹಾಕಿದ್ದಕ್ಕೆ ಆಕ್ಷೇಪ. ಯುವಕರು, ಮಹಿಳೆಯರು, ವೃದ್ದರಿಗೆ ಮನಬಂದಂತೆ ಥಳಿಸಿದ ಪೊಲೀಸರು.
- ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ನಡೆದ ಅಮಾನವೀಯ ಘಟನೆ.
ಕುಂದಾಪುರ: ಕೊರಗ ಸಮುದಾಯದ ಯುವಕನ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿ ಮದುಮಗನೂ ಸೇರಿದಂತೆ ಮೆಹೆಂದಿ ಕಾರ್ಯಕ್ರಮಕ್ಕೆ ಬಂದ ಕೊರಗ ಸಮುದಾಯದವರ ಮೇಲೆ ಪೊಲೀಸರು ಮನಬಂದಂತೆ ಥಳಿಸಿ ಮೆಹೆಂದಿ ಸಂಭ್ರಮಕ್ಕೆ ಅಡ್ಡಿಪಡಿಸಿದ ಅಮಾನವೀಯ ಘಟನೆ ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಾದ ಕೋಟತಟ್ಟು ಗ್ರಾ.ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಮದುಮಗ ರಾಜೇಶ್, ಕೊರಗ ಸಮುದಾಯದ ಮುಖಂಡ ಗಣೇಶ್ ಕೊರಗ, ಸುಂದರಿ, ಲಕ್ಷ್ಮೀ, ಬೇಬಿ, 12 ವರ್ಷ ಪ್ರಾಯದ ಬಾಲಕಿ, ಮದುಮಗನ ತಾಯಿ ಗಿರಿಜಾ, ಪ್ರವೀಣ್, ಶೇಖರ್ ಮೊದಲಾದವರಿಗೆ ಕೈ, ಕಾಲು, ತಲೆ, ಕುತ್ತಿಗೆ ಮೊದಲಾದೆಡೆ ಗಾಯಗಳಾಗಿದೆ.
ಸೋಮವಾರ ರಾತ್ರಿ ನಡೆದ್ದೇನು?
ಕೋಟತಟ್ಟು ಪ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ರಾಜೇಶ್ ಎನ್ನುವವರ ಮದುವೆ ಡಿ.29ಕ್ಕೆ ಕುಮಟಾದಲ್ಲಿ ನಡೆಯಲಿದ್ದು, ಸೋಮವಾರ ಮನೆಯಲ್ಲಿಯೇ ಅದ್ದೂರಿ ಮೆಹೆಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲನಿಯಲ್ಲಿನ ಸಮುದಾಯದವರು ಮತ್ತು ಊರಿನ ಗೆಳೆಯರು ಮೆಹೆಂದಿ ಶಾಸ್ತ್ರಕ್ಕೆ ಬಂದಿದ್ದರು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೋಲಿಸ್ 112 ವಾಹನ ಆಗಮಿಸಿ ಡಿಜೆ ಶಬ್ಧ ತೆಗೆಯುವಂತೆ ಸೂಚಿಸಿದ್ದು ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್ಐ ಹಾಗೂ ಇತರ ಕೆಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದಾರೆ. ಈ ವೇಳೆಯಲ್ಲಿ ತಪ್ಪಿಸಲು ಹೋದ ಮಹಿಳೆಯರ ಮೇಲೂ ಥಳಿಸಿದ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿದವರ ಮೊಬೈಲ್ ಕಸಿದುಕೊಂಡು ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಮೂತ್ರ ವಿಸರ್ಜನೆಗೆ ತೆರಳಿದ್ದ ಮಹಿಳೆಯರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ಕೊರಗ ಮುಖಂಡ ಗಣೇಶ್ ಬಾರಕೂರು ಸೇರಿದಂತೆ ನಾಲ್ಕೈದು ಕೊರಗ ಸಮುದಾಯದ ಯುವಕರನ್ನು ಠಾಣೆಗೆ ಕರೆದೊಯ್ದು ಶರ್ಟ್ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಮೇಲೆ ಗೌರವ ಕಳೆದುಕೊಂಡಿದ್ದೇವೆ: ಗಣೇಶ್ ಬಾರ್ಕೂರು
ಮದುಮಗನ ಅಣ್ಣ ಗಿರೀಶ್, ಸುದರ್ಶನ ಹಾಗೂ ಸಚಿನ್ ಎನ್ನುವವರನ್ನು ಕೂಡ ಠಾಣೆಗೆ ಕರೆದೊಯ್ದು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದವರು ಆರೋಪಿಸಿದ್ದಾರೆ. ಈ ಬಗ್ಗೆ ಗಣೇಶ್ ಕೊರಗ ಪ್ರತಿಕ್ರಿಯೆ ನೀಡಿ, ಡಿಜೆ ಶಬ್ದ ಕಡಿಮೆ ಮಾಡಲು ಹೇಳಿ ತೆರಳುವಾಗಲೇ ಏಳೆಂಟು ಮಂದಿ ಪೋಲಿಸರು ಬಂದು ಏಕಾಏಕಿ ಜೀಪಿಗೆ ಎಳೆದೊಯ್ದರು. ಬಾಯಿಗೆ ಬಂದಂತೆ ಅವ್ಯಾಚವಾಗಿ ಬೈದರು. ಹೆಂಗಸರು, ಮಕ್ಕಳು, ವೃದ್ಧರು ಎಂದು ನೋಡದೇ ಹಲ್ಲೆ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ ನಾವು ಯಾವ ದೇಶದಲ್ಲಿದ್ದೇವೆ. ನಮಗೆ ಬದುಕುವ ಹಕ್ಕಿಲ್ಲವೇ ಎಂಬುದು ತಿಳಿಯುತ್ತಿಲ್ಲ. ಕೊರಗ ಚಳವಳಿಯ ನನ್ನ ಸುದೀರ್ಘ ಜೀವನದಲ್ಲಿ ಪೊಲೀಸರಿಂದ ಈ ರೀತಿಯಾಗಿ ಅಮಾನವೀಯ ಹಲ್ಲೆ ನಾನು ಇದುವರೆಗೂ ಕಂಡಿಲ್ಲ. ಡಿಜೆ ಅಳವಡಿಸಿದ್ದಕ್ಕೆ ಸಾರ್ವಜನಿಕ ದೂರುಗಳು ಬಂದರೆ ಡಿಜೆ ಸಿಲ್ಲಿಸಿ ತೆರಳಬಹುದಿತ್ತು. ಆದರೆ ಏಕಾಏಕಿಯಾಗಿ ದೊಡ್ಡ ತಪ್ಪು ಮಾಡಿರುವ ಹಾಗೆ ಎಲ್ಲರನ್ನೂ ಎಳೆದಾಡಿ ಥಳಿಸಿ ಲಾಠಿ ಬೀಸುವ ಹಕೀಕತ್ತು ಏನಿತ್ತು. ನಾವು ಕೊರಗರು ನಮ್ಮ ಹಿರಿಯವರಂತೆ ಅವರಿವರಲ್ಲಿ ಕೈಚಾಚಿಕೊಂಡೆ ಇರಬೇಕಾ. ನಾನೊಬ್ಬ ಕೊರಗ ಮುಖಂಡ ಎಂದು ನೋಡದೇ ನನ್ನ ಕುತ್ತಿಗೆ ಪಟ್ಟಿ ಹಿಡಿದು ಜೀಪಲ್ಲಿ ತುಂಬಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಈ ದುರ್ಘಟನೆಯಿಂದಾಗಿ ಪೊಲೀಸರ ಮೇಲಿದ್ದ ಗೌರವ ಕಳೆದುಕೊಂಡಿದ್ದೇವೆ ಎಂದರು.
ಬ್ರಹ್ಮಾವರ ಸಿಪಿಐ ಭೇಟಿ, ತನಿಖೆ ಭರವಸೆ..:
ಘಟನೆ ನಡೆದ ಕೊರಗ ಕಾಲನಿಗೆ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಮಂಗಳವಾರ ಭೇಟಿ ನೀಡಿದರು. ನೊಂದ ಕಾಲನಿನಿವಾಸಿಗಳು ತಮಗಾದ ಅನ್ಯಾಯವನ್ನು ಅವರೆದುರು ಎಳೆಎಳೆಯಾಗಿ ಬಿಚ್ಚಿಟ್ಟರು. ಹಾಗೂ ಕೊರಗ ಸಮುದಾಯದವರು, ಸ್ಥಳೀಯ ನಾಗರಿಕರು ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ, ಘಟನೆ ಬಗ್ಗೆ ಈಗಾಗಾಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಪೋಲಿಸ್ ಇಲಾಖೆ ಮೇಲೆ ಸಮುದಾಯದವರು ವಿಶ್ವಾಸವಿಡಿ. ಘನಟೆಯಾದ ಸಂದರ್ಭದಲ್ಲಿನ ವಿಡಿಯೋ ದೃಶ್ಯಾವಳಿಗಳನ್ನು ಗಮನಿಸಿ ಸೂಕ್ತ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು. ದಲಿತ ಸಂಘಟನೆ ಮುಖಂಡರಾದ ಶ್ಯಾಮಸುಂದರ್, ಮಂಜುನಾಥ ಗಿಳಿಯಾರ್, ರಾಜು ಬೆಟ್ಟಿನಮನೆ, ಸತೀಶ್ ತೆಕ್ಕಟ್ಟೆ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶಂಕರ್ ಕೋಟ, ರಂಜಿತ್ ಮೊಗವೀರ ಸ್ಥಳೀಯರಾದ ರತ್ನಾಕರ ಕೋಟ, ನಾಗರಾಜ್ ಪುತ್ರನ್, ಸತೀಶ್ ಬಾರಿಕೆರೆ ಮೊದಲಾದವರು ಭೇಟಿ ನೀಡಿ ನೊಂದವರಿಗೆ ಧೈರ್ಯ ತುಂಬಿದರು.
ಇವರು ಖಂಡಿತ ಪೊಲೀಸರಲ್ಲ..!?
ಮೆಹೆಂದಿ ಶಾಸ್ತ್ರ ಮುಗಿಸಿ ಇನ್ನೇನು ಎಲ್ಲರ ಊಟ ಮಾಡುವ ಹೊತ್ತಾಗಿತ್ತು. ಅಷ್ಟರಲ್ಲಾಗಲೇ ಬಂದ ಪೆÇಲೀಸರು ಯಾವುದೇ ಸೂಚನೆ ನೀಡದೆ ಮನಸ್ಸೋಇಚ್ಚೆ ಹಲ್ಲೆ ಮಾಡಿದರು. ಏನಾಗುತ್ತಿದೆ ತಿಳಿಯುವಷ್ಟರಲ್ಲಿ ಲಾಠಿ ಬೀಸಿದ್ದರು. ನಮ್ಮದೇನು ತಪ್ಪಿಲ್ಲ, ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದು ಅಂಗಲಾಚಿದರೂ ಕೂಡ ಪೋಲಿಸರ ಮನಸ್ಸು ಕರಗಿಲ್ಲ..ಇವರು ನಿಜವಾಗಿಯೂ ಪೊಲೀಸರಲ್ಲ ಎಂದು ಹಲ್ಲೆಗೊಳಗಾದ ವೃದ್ದೆಯೊಬ್ಬರು ಕಣ್ಣೀರು ಹಾಕುತ್ತಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ವೈರಲ್..ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:
ಕೊರಗ ಸಮುದಾಯದವರ ಮೇಲೆ ನಡೆದ ಪೊಲೀಸ್ ಹಲ್ಲೆಯ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರ ಅಮಾನವೀಯ ನಡೆಯ ವಿರುದ್ದ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ವಿವಿಧ ಸಂಘನೆಗಳು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆ.
ಕೊರಗರಿಗೆ ಕಾರ್ಯಕ್ರಮ ಮಾಡುವ ಹಕ್ಕಿಲ್ಲವೇ? -ಗಣೇಶ್ ಕುಂಭಾಶಿ, ಕೊರಗ ಶ್ರೇಯೋಭಿವೃದ್ದಿ ಮುಖಂಡ
ಮೂಲ ನಿವಾಸಿಗಳೆಂದು ಕರೆಸಿಕೊಳ್ಳುವ ಕೊರಗ ಸಮುದಾಯದವರು ಮುಗ್ಧರು. ಸಾಲ ಮಾಡಿ ಒಂದೊಳ್ಳೆ ಕಾರ್ಯಕ್ರಮ ಮಾಡಲು ಇಲಾಖೆ ಬಿಡುತ್ತಿಲ್ಲ. ಹಾಗಾದರೆ ಕೊರಗರು ಹಿಂದಿನಂತೆ ಬೇಡಿಯೇ ತಿನ್ನಬೇಕಾ? ಇದೆಲ್ಲಾ ಗಮನಿಸಿದಾಗ ದಲಿತರು, ಕೊರಗರ ಹಕ್ಕಿನ ಬಗ್ಗೆ ಕುಂದುಕೊರತೆ ಸಭೆ ಕರೆಯುವುದು ಕೇವಲ ಕಾಟಾಚಾರಕ್ಕೆ ಎಂದು ಅನ್ನಿಸುತ್ತಿದೆ. ಈ ಘಟನೆಯಿಂದ ಇಡೀ ಸನುದಾಯಕ್ಕೆ ನೋವಾಗಿದೆ. ಜಿಲ್ಲೆಯಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ ಇದಾಗಿದೆ. ಪಿಎಸ್ಐ ಹಾಗೂ ಸಂಬಂದಪಟ್ಟ ಪೋಲೀಸ್ ಸಿಬ್ಬಂದಿಗಳ ಮೇಲೆ ಕಾನೂನಿನಡಿ ಸೂಕ್ತ ಕ್ರಮವಾಗಬೇಕು ಎಂದು ಕೊರಗ ಶ್ರೇಯೋಭಿವೃದ್ದಿ ಮುಖಂಡ ಗಣೇಶ್ ಕುಂಭಾಶಿ ಆಕ್ರೋಶ ವ್ಯಕ್ತಪಡಿಸಿದರು
ಮುಗ್ಧ ಜನರ ಮೇಲೆ ಹಲ್ಲೆ ಖಂಡನೀಯ – -ಪ್ರಮೋದ್ ಹಂದೆ, ನ್ಯಾಯವಾದಿ, ಗ್ರಾ.ಪಂ ಸದಸ್ಯ
ಕಾಲನಿಯಲ್ಲಿ 30 ವರ್ಷಗಳ ಬಳಿಕ ನಡೆಯುವ ಒಂದೊಳ್ಳೆ ಕಾರ್ಯಕ್ರಮ ಇದಾಗಿತ್ತು. ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಅಂತಹ ಸಂದರ್ಭ ಪೋಲಿಸರು ಈ ರೀತಿ ದುರ್ವರ್ತನೆ ತೋರಿದ್ದು ಖಂಡನೀಯ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದು ನ್ಯಾಯವಾದಿ ಗ್ರಾಪಂ ಸದಸ್ಯ ಪ್ರಮೋದ್ ಹಂದೆ ಹೇಳಿದರು.
ಕೋಟತಟ್ಟು ಕೊರಗ ಸಮುದಾಯದವರ ಮೇಲೆ ಪೊಲೀಸರ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈಗಾಗಲೇ ಡಿಸಿ, ಎಸ್ಪಿ, ಐಜಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಕ್ರಮಕೈಗೊಂಡು ನ್ಯಾಯ ಒದಗಿಸಲು ಸೂಚನೆ ನೀಡಿದ್ದೇನೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿರುವುದರಿಂದ ಬುಧವಾರ ಸಂಜೆ ಹೊರಟು ಗುರುವಾರ ಬೆಳಿಗ್ಗೆ ಕೊರಗ ಕಾಲನಿಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುತ್ತೇನೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮ್ಯಾಂಗಲೋರಿಯನ್ ಪ್ರತಿನಿಧಿಗೆ ಸ್ಪಷ್ಟಪಡಿಸಿದ್ದಾರೆ
Horrible.