
ಕೊರೊನಾ ನಿಯಂತ್ರಿಸಲು ಗ್ರಾ.ಪಂ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು – ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ಹಳ್ಳಿ ಭಾಗಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಗ್ರಾ.ಪಂ ಕಾರ್ಯಪಡೆಯ ಜವಾಬ್ದಾರಿ ಮಹತ್ತರವಾಗಿದೆ. ಕೊರೊನಾ ನಿಯಂತ್ರಿಸಲು ಗ್ರಾ.ಪಂ ಮಟ್ಟದಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬುಧವಾರ ನಾಡ ಗ್ರಾ.ಪಂ.ಗೆ ಭೇಟಿ ನೀಡಿ, ಕೋವಿಡ್ ಗ್ರಾಮೀಣ ಕಾರ್ಯಪಡೆಯ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಈಗಾಗಲೇ ನಾಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಂಕಿತರು ಹಾಗೂ ಗರಿಷ್ಠ ಸಾವಿನ ಪ್ರಕರಣವಿದೆ. ಜೂ.೧೫ ರೊಳಗೆ ಕೊರೊನಾ ಸೋಂಕಿತರ ಸಂಖ್ಯೆಯನ್ನು ಶೂನ್ಯಕ್ಕಿಳಿಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು.
ನಾಡಾದಲ್ಲಿ ಈಗ ಕೆಲ ದಿನಗಳಿಂದ ಸ್ವಲ್ಪ ಮಟ್ಟಿಗೆ ಕೊರೊನಾ ನಿಯಂತ್ರಣದಲ್ಲಿದ್ದು, ಜಿಲ್ಲೆಯಲ್ಲಿಯೇ ಗರಿಷ್ಠ 12 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ನಿಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಿಸುವ ಜವಾಬ್ದಾರಿ ಕಾರ್ಯಪಡೆಯದ್ದೇ ಆಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಕ್ರೀಯರಾಗಿ ಕೆಲಸ ಮಾಡಬೇಕು. ಸಂಪೂರ್ಣ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಕಾರ್ಯಪಡೆ ನಿಗಾ ವಹಿಸಬೇಕು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಶೋಭಾಲಕ್ಷಿ÷್ಮ, ಕಾರ್ಯನಿರ್ವಹಣಾಧಿಕಾರಿ ಭಾರತಿ, ಜಿ.ಪಂ. ಮಾಜಿ ಸದಸ್ಯ ಬಾಬು ಹೆಗ್ಡೆ, ಬೈಂದೂರು ತಾ.ಪಂ. ಮಾಜಿ ಮಹೇಂದ್ರ ಪೂಜಾರಿ, ಮಾಜಿ ಸದಸ್ಯ ಪ್ರವೀಣ್ ಶೆಟ್ಟಿ ಕಡ್ಕೆ, ನಾಡ ಗ್ರಾ.ಪಂ. ಅಧ್ಯಕ್ಷ ದಿನೇಶ್ ಶೆಟ್ಟಿ, ಉಪಾಧ್ಯಕ್ಷ ಪದ್ದು ಪೂಜಾರ್ತಿ, ಪಿಡಿಒ ಹರೀಶ್, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಿಕ್ಮರಿ, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪಿಎಸ್‌ಐ ನಂಜಾ ನಾಯ್ಕ್, ಗ್ರಾಮ ಕರಣಿಕರು, ಗ್ರಾ.ಪಂ. ಸದಸ್ಯರು, ಗ್ರಾಮೀಣ ಕಾರ್ಯಪಡೆಯ ಸದಸ್ಯರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.