ಕೊರೊನಾ ಮುಕ್ತ ಬಿ.ಆರ್.ಹಿಲ್ಸ್ ವ್ಯಾಕ್ಸಿನ್‌ಯುಕ್ತವಾಗಲಿ!

Spread the love

ಕೊರೊನಾ ಮುಕ್ತ ಬಿ.ಆರ್.ಹಿಲ್ಸ್ ವ್ಯಾಕ್ಸಿನ್‌ಯುಕ್ತವಾಗಲಿ!

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ಈಗಾಗಲೇ ಕೊರೊನಾ ಮುಕ್ತ ಗ್ರಾಪಂ ಆಗಿದ್ದು, ಇನ್ಮುಂದೆ ಇಲ್ಲಿನ ನಿವಾಸಿಗಳಿಗೆ ವ್ಯಾಕ್ಸಿನ್ ನೀಡುವುದರೊಂದಿಗೆ ವ್ಯಾಕ್ಸಿನ್ ಯುಕ್ತ ಮಾಡುವತ್ತ ಜಿಲ್ಲಾಡಳಿತ ಮುಂದಾಗಿದೆ.

ಬಿಳಿಗಿರಿರಂಗನಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಸೋಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕಾಡಂಚಿನ ಹಾಡಿಗಳಲ್ಲಿ ವಾಸಿಸುವ ಜನಕ್ಕೆ ಕೋವಿಡ್ ವ್ಯಾಕ್ಸಿನ್ ನೀಡುವುದು ಕಷ್ಟದ ಕೆಲಸವಾಗಿದೆ. ಈಗಲೂ ಹಾಡಿಯ ವಾಸಿಗಳು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಧಿಕಾರಿಗಳು ಲಸಿಕೆ ಕಾರ್ಯ ನಡೆಸುತ್ತಿದ್ದಾರೆ.

ಈ ನಡುವೆ ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಅವರು ಕೋವಿಡ್ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಗ್ರಾಪಂ ವ್ಯಾಪ್ತಿಯ ಎಲ್ಲ ನಿವಾಸಿಗಳು ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೂಲಕ ರಾಜ್ಯದ ಪ್ರಥಮ ವ್ಯಾಕ್ಸಿನ್ ಪಡೆದ ಗ್ರಾಮ ಪಂಚಾಯಿತಿಯಾಗಲು ಯತ್ನಿಸಬೇಕೆಂದು ಹೇಳಿದರಲ್ಲದೆ, ಗುಡ್ಡಗಾಡಿನ ಬುಡಕಟ್ಟು ಜನರು ಈಗಲೂ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಸೋಲಿಗ ಮುಖಂಡರು, ಸಂಘಸಂಸ್ಥೆಯವರು, ಚುನಾಯಿತ ಜನಪ್ರತಿನಿಧಿಗಳು ಆರೋಗ್ಯ ಕಾರ್ಯಕರ್ತರು ಮನವೊಲಿಸಿ, ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಮಾಡಿ ಎಂದು ಹೇಳಿದರು.

ಇನ್ನು ಸಭೆಯಲ್ಲಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಅವರು, ಬಿಳಿಗಿರಿರಂಗನಬೆಟ್ಟ ಪ್ರಥಮ ಕೋವಿಡ್ ಮುಕ್ತ ಪಂಚಾಯಿತಿ ಆಗಿದೆ. ಇದೊಂದು ಪ್ರವಾಸಿತಾಣವೂ ಆಗಿರುವುದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಕೋವಿಡ್ ಮುಕ್ತ ಪಂಚಾಯಿತಿ ಎಂದು ಫ್ಲೆಕ್ಸ್ ಹಾಕಿಸಿ. ಇದರೊಂದಿಗೆ ಕೋವಿಡ್ ನಿಯಮಗಳು ಜಾಗೃತಿಯ ಬಗೆಯೂ ಮಾಹಿತಿಯನ್ನು ನೀಡಿ ಎಂದು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಬೇದೇಗೌಡ, ಸದಸ್ಯರಾದ ಪ್ರದೀಪ್‌ಕುಮಾರ್, ಕಮಲಮ್ಮ, ಸಾಕಮ್ಮ, ಮಾದಮ್ಮ, ಸಿ.ಡಿ. ಮಹದೇವ ಪಿಡಿಒ ಸ್ವಾಮಿ, ಜಿಪಂ ಸಿಇಒ ಹರ್ಷಲ್ ಭೋಯರ್ ನಾಯರಾಯಣರಾವ್, ತಹಸೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಸಿಡಿಪಿಒ ದೀಪಾ, ಬಿಇಒ ವಿ. ತಿರುಮಲಾಚಾರಿ, ಜಯಕಾಂತ ಮುಖಂಡರಾದ ಸಿ. ಮಾದೇಗೌಡ, ವೆಂಕಟೇಶ್, ಅರುಣ್‌ಕುಮಾರ್, ರಾಮಾಚಾರಿ, ನಾಗೇಶ್ ಸೇರಿದಂತೆ ಹಲವರು ಇದ್ದರು.


Spread the love