ಕೊರೋನಾ ನಡುವೆಯೂ ದೇಶದ ಆರ್ಥಿಕತೆ ಮರುರೂಪುಗೊಳ್ಳುತ್ತಿದೆ- ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಮರಾಠೆ

Spread the love

ಕೊರೋನಾ ನಡುವೆಯೂ ದೇಶದ ಆರ್ಥಿಕತೆ ಮರುರೂಪುಗೊಳ್ಳುತ್ತಿದೆ- ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಮರಾಠೆ

ಉಡುಪಿ: ಈ ವರ್ಷ ಕೊರೋನಾ ಸಾಂಕ್ರಮಿಕ ರೋಗವು ಭಾರತದ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರಿದ್ದರೂ, ಪ್ರಸ್ತುತ ದೇಶದ ಆರ್ಥಿಕತೆ ಮರುರೂಪುಗೊಳ್ಳುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶಕ ಸತೀಶ್ ಕಾಶಿನಾಥ್ ಮರಾಠೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಶುಕ್ರವಾರ ಉಡುಪಿಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಆಶ್ರಯದಲ್ಲಿ ನಡೆದ ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕತೆ ಮತ್ತು ಬ್ಯಾಂಕಿಂಗ್ ಎಂಬ ಬಗ್ಗೆ ವಿವಿಧ ರಂಗಗಳ ಗಣ್ಯರೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಎರಡು ವರ್ಷಗಳ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ಜಾರಿಗೊಳಿಸಿದ್ದ ರಚನಾತ್ಮಕ ನೀತಿಗಳಿಂದಾಗಿ, ಇನ್ನೊಂದು ವರ್ಷದೊಳಗೆ ಭಾರತದ ಆರ್ಥಿಕತೆಯು ಪುಟಿದೇಳುತ್ತದೆ. ಕೊರೋನಾದಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಿದೆ, ಹಣದ ಹರಿವೂ ಹೆಚ್ಚಾಗಿದೆ. ಬ್ಯಾಂಕುಗಳು ಕಡಿಮೆ ಸಿಬ್ಬಂದಿಗಳೊಂದಿಗೆ, ಹೆಚ್ಚಿನ ಒತ್ತಡದಲ್ಲಿಯೂ ಒಳ್ಳೆಯ ಕೆಲಸ ಮಾಡಿವೆ. ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹ ಹೆಚ್ಚಾಗಿದೆ. ಆದರೇ ಸಾಲ ಪಡೆಯುವವರ ಸಂಖ್ಯೆ ಕಡಿಮೆಯಾಗಿರುವುದು ನಿಜ,ಆದರೇ ಇದು ತಾತ್ಕಾಲಿಕ ಬೆಳವಣಿಗೆ ಎಂದವರು ಹೇಳಿದರು.

ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ, ಜಿಎಸ್ ಟಿ ಮತ್ತು ರೇರಾ (ರಿಯಲ್ ಎಸ್ಟೇಟ್ ರೆಗ್ಯುಲೆಟರಿ ಅಥಾರಿಟಿ) ಕಾಯ್ದೆಗಳು ಭಾರತದ ಆರ್ಥಿತಿಕತೆಯ ಮೇಲೆ ದೊಡ್ಡ ಪ್ರಭಾವವನ್ನು ಬೀರಿ, ಆರಂಭದಲ್ಲಿ ಅವುಗಳಿಂದ ಸ್ವಲ್ಪ ಮಟ್ಟಿನ ಆರ್ಥಿಕ ಬೆಳವಣಿಗೆ ಸ್ಥಗಿತವೂ ಆಗಿದ್ದು ನಿಜ. ಆದರೇ ಇಂದು ನೋಟು ಅಮಾನ್ಯೀಕರಣದಿಂದ ಕ್ಯಾಶ್ ಲೆಸ್ ಎಕಾನಮಿ ಸಾಧ್ಯವಾಗಿದೆ. ಜಿಎಸ್ ಟಿಯನ್ನು ಇಂದು ಎಲ್ಲಾ ವ್ಯವಹಾರಸ್ಥರು ನಿರಾತಂಕಿತರಾಗಿದ್ದಾರೆ, ರೆರಾ ಕಾಯ್ದೆಯಿಂದ ಸಾಮಾನ್ಯ ಜನರ ಆಶಯಗಳ ರಕ್ಷಣೆಯಾಗಿದೆ ಎಂದವರು ವಿಶ್ಲೇಷಿಸಿದರು.

ಬ್ಯಾಂಕ್ಗಳ ವಿಲೀನದಿಂದ ಸ್ಪರ್ಧಾತ್ಮಕತೆ ಹೆಚ್ಚಲಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳು ಲಭಿಸಲಿವೆ. ಮುಖ್ಯವಾಗಿ ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಆರ್ಬಿಐ ಅಂದಾಜು ಪ್ರಕಾರ 2021-22ನೇ ಸಾಲಿನಲ್ಲಿ ಸೇವಾ ವಲಯ ಶೇ. 7 ರಿಂದ 8ರಷ್ಟು ಬೆಳವಣಿಗೆ ಕಾಣಲಿದೆ ಎಂದರು.

ಲಡಾಖ್ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಭಾರತವು ಚೀನಾದ ವಸ್ತುಗಳನ್ನು ಬಹಿಷ್ಕರಿಸಿತು. ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಪರಿಣಾಮ ಚೀನಾದಿಂದ ಆಮದು ಪ್ರಮಾಣ ತಗ್ಗಿದೆ. ಕೋವಿಡ್ ಸಮಯದಲ್ಲಿ ಸುಮಾರು 450 ವಿದೇಶಿ ಕಂಪೆನಿಗಳು ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿವೆ ಇವು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತವೆ ಎಂದು ಮರಾಠೆ ಆಶಿಸಿದರು.

ದೇಶದ ಕೃಷಿ ಕ್ಷೇತ್ರ ಬಲಿಷ್ಟವಾಗಿದೆ ಎನ್ನುವುದಕ್ಕೆ, ಪ್ರಸ್ತುತ ದೇಶದಲ್ಲಿ ಅಗತ್ಯಕ್ಕಿಂತ 2.50 ಪಟ್ಟು ಆಹಾರೋತ್ಪನ್ನಗಳು ಸಂಗ್ರಹ ಇರುವುದೇ ಸಾಕ್ಷಿ ಎಂದರು.

ಮಹಾಲಕ್ಷ್ಮೀ ಕೋಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಮರಾಠೆ ಅವರನ್ನು ಸ್ವಾಗತಿಸಿದರು.


Spread the love