ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ವಿಧಿಸಿರುವ ಕೊರೋನಾ ಕಫ್ರ್ಯೂವನ್ನು ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿ ಸೋಂಕು ತಡೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ರ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಜಾರಿಯಲ್ಲಿರುವ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಾದ್ಯಂತ ಕೊರೋನಾ ಸೋಂಕಿನ ಪ್ರಮಾಣವು ನಿಗಧಿತ ದರದಲ್ಲಿ ಕಡಿಮೆಯಾಗಿಲ್ಲ ಇದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಯಾವ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸೋಂಕು ಹೆಚ್ಚಿರುವುದು ಕಂಡುಬರುತ್ತಿದೆಯೋ ಆ ವ್ಯಾಪ್ತಿಯ ಪ್ರದೇಶವನ್ನು ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ವಿಧಿಸಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರೊಂದಿಗೆ ಸೋಂಕನ್ನು ಪೂರ್ಣ ಹತೋಟಿಗೆ ತರಬೇಕು ಎಂದ ಅವರು, ಸೋಂಕು ಹೊಂದಿರುವವರ ಮನೆಗಳನ್ನು ತಪ್ಪದೇ ಸೀಲ್‍ಡೌನ್ ಮಾಡಬೇಕು. 5 ಕ್ಕಿಂತ ಹೆಚ್ಚು ಪ್ರಕರಣಗಳು ಗ್ರಾಮಗಳಲ್ಲಿ ಕಂಡುಬಂದಲ್ಲಿ ಕಂಟೈನ್‍ಮೆಂಟ್ ಜೋನ್‍ಗಳೆಂದು ಘೋಷಿಸಬೇಕು ಎಂದರು.

ಕೋವಿಡ್ ದೃಢ ಪ್ರಮಾಣವು ಮಂಗಳೂರು ತಾಲೂಕಿನಲ್ಲಿ ಶೇ.15, ಬಂಟ್ವಾಳದಲ್ಲಿ ಶೇ.12, ಬೆಳ್ತಂಗಡಿಯಲ್ಲಿ ಶೇ.24, ಪುತ್ತೂರಿನಲ್ಲಿ ಶೇ.22, ಸುಳ್ಯದಲ್ಲಿ ಶೇ.27 ರಷ್ಟಿದೆ ಎಂದ ಅವರು, ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು. ಬಂಟ್ವಾಳ ತಾಲೂಕಿನಲ್ಲಿ ಹಳ್ಳಿಯ ಕಡೆ ವೈದ್ಯರ ನಡೆ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ ಅದೇ ರೀತಿ ಇತರೆ ತಾಲೂಕುಗಳಲ್ಲಿಯೂ ಸಹ ಪರಿಣಾಮಕಾರಿಯಾಗಿ ಆಗಬೇಕು ಎಂದರು.

ಲಾಕ್‍ಡೌನ್ ಅವಧಿಯಲ್ಲಿ ಬ್ಯಾಂಕಿಂಗ್‍ನ ಕಾರ್ಯಚಟುವಟಿಕೆಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾಡಲು ಅವಕಾಶ ಮಾಡಿಕೊಡಬೇಕು. ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಅವಧಿಯಲ್ಲಿ ಕನ್ನಡಕ ಮಾರಾಟ ಅಂಗಡಿ ಹಾಗೂ ಅವುಗಳ ರಿಪೇರಿ ಅಂಗಡಿಗಳಿಗೆ, ಗ್ಯಾರೇಜು ಹಾಗೂ ವಾಹನಗಳ ಸರ್ವಿಸ್ ಸೆಂಟರ್ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದರು.

ಸಂಸದ ನಳೀನ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸೋಂಕು ಹೆಚ್ಚಿದ್ದರೂ ಜನರು ನಿರ್ಭೀತರಾಗಿ ಓಡಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಜನರು ಜಾಗೃತರಾಗಿ ಕೊರೋನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿದ್ದಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಮಾತನಾಡಿ, ಜಿಲ್ಲೆಯಲ್ಲಿ ಲಾಕ್‍ಡೌನ್‍ಅನ್ನು ಒಂದು ವಾರಕ್ಕೆ ವಿಸ್ತರಿಸಲು ನೆನ್ನೆ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ತಿಳಿಸಿದ್ದೇವೆ, ಮುಂದಿನ ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯ. ಈಗಿರುವ ನಿರ್ಬಂಧನೆಗಳಲ್ಲಿ ಯಾವುದೇ ಸಡಿಲವನ್ನು ಮಾಡಿದರೆ ಸೋಂಕು ನಿಯಂತ್ರಣ ತರಲು ಕಷ್ಟವಾಗುತ್ತದೆ ಎಂದರು.

ಜಿಲ್ಲೆಯ 40 ಗ್ರಾಮಗಳಲ್ಲಿ ಹಾಗೂ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೆಳ್ತಂಗಡಿಯ ನಗರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣವು ಹೆಚ್ಚು ಇರುವುದು ಕಂಡುಬರುತ್ತಿವೆ. ಈ ಪ್ರದೇಶಗಳ ಸಂಪೂರ್ಣ ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಆಧರಿಸಿ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ವಿಧಿಸಲು ಆದೇಶಿಸಲಾಗವುದು ಎಂದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಅಗತ್ಯವಿರುವ ಪರಿಕರಗಳು, ವಾಹನ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲು ಕ್ರಮವಹಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾರಿ ಡಾ.ಕುಮಾರ್ ಮಾತನಾಡಿ, ಈಗಾಗಲೆ ಹೋಂ ಐಸೋಲೇಷನ್ ನಲ್ಲಿರುವ ಮನೆಗಳನ್ನು ಸೀಲ್‍ಡೌನ್ ಮಾಡಲಾಗುತ್ತಿದೆ. ಕೆಲವು ಗ್ರಾಮ ಪಂಚಾಯತ್‍ನ ಪ್ರತಿನಿಧಿಗಳು ಹೆಚ್ಚು ಸೋಂಕಿರುವ ತಮ್ಮ ಗ್ರಾಮಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಿ ಎಂದು ಸ್ವ-ಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ ಎಂದರು.

ಸಭೆಯಲ್ಲಿ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಮಹಾನಗರಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪೆÇಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಡಿಸಿಪಿ ಹರಿರಾಂ ಶಂಕರ್, ಎ.ಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here