ಕೊರೋನಾ ಮಹಾಮಾರಿ – ಒಂದು ಯಶೋಗಾಥೆ

Spread the love

ಕೊರೋನಾ ಮಹಾಮಾರಿ – ಒಂದು ಯಶೋಗಾಥೆ

ಇತ್ತೀಚಿನ ದಿನಗಳಲ್ಲಿ ಕೊರೋನಾ ಮಹಾಮಾರಿಯ ಬಗೆಗಿನ ಯಾವ ಸುದ್ದಿಯೂ ಸುದ್ದಿಯಾಗಿ ಉಳಿದಿಲ್ಲ. ಈ ಮಹಾಮಾರಿಯ ದೆಸೆಯಿಂದ ಸಮಾಜ ದೈಹಿಕವಾಗಿಯೂ, ಮಾನಸಿಕವಾಗಿಯೂ ಬಸವಳಿದಿರುವುದು ಸುಳ್ಳಲ್ಲ. ಕೊರೋನಾ ಹಬ್ಬದ ಆರಂಭದ ದಿನಗಳಲ್ಲಂತೂ ಅದರ ಸಂಕೀರ್ಣತೆಗಳಿಂದ  ರೋಗಿ ಹಠಾತ್ ಸಾವಿಗೀಡಾಗುವುದು ಸರ್ವೇ ಸಾಮಾನ್ಯ ಎಂಬಂತಿತ್ತು. ಹಾಗಿರುವಾಗ ಈ ಮಹಾಮಾರಿಯ ಪ್ರಾಣಾಂತಿಕ ಸಂಕೀರ್ಣತೆಗಳಲ್ಲೊಂದಾದ ಜೀರ್ಣಂಗವ್ಯೂಹದ ರಕ್ತನಾಳದ ಹೆಪ್ಪುಗಟ್ಟುವಿಕೆಯನ್ನು ಮೆಟ್ಟಿನಿಂತು ಮೃತ್ಯುವನ್ನು ಹಿಮ್ಮೆಟ್ಟಿಸಿದ ವ್ಯಕ್ತಿಯೊಬ್ಬರ ಯಶೋಗಾಥೆ ಜನಸಾಮಾನ್ಯರ ಮನೋಸ್ಥೈರ್ಯವನ್ನು ಹೆಚ್ಚಿಸಬಲ್ಲದು.

ಶ್ರೀಯುತ. ಬಾಬು (ಹೆಸರು ಬದಲಿಸಲಾಗಿದೆ) ಅವರು ಕೊರೋನಾಕ್ಕೆ ತುತ್ತಾಗೆ ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಾದದ್ದು ಮಾಹಾಮಾರಿಯ ಅವೇಗ ತುತ್ತತುದಿಯಲ್ಲಿದ್ದಾಗ. ಕೊರೋನಾ ಎಂದರೆ ಒಂದು ರೀತಿಯ ಶ್ವಾಸಕೋಶದ ನ್ಯೂಮೋನಿಯಾ ಎಂಬಷ್ಟೇ ಗೊತ್ತಿದ್ದ ಕಾಲವದು. ದೇಹದಲ್ಲಿನ ರಕ್ತನಾಳಗಳು ರಕ್ತಹೆಪ್ಪುಗಟ್ಟುವಿಕೆಯಿಂದ ಹಠಾತ್ತನೆ ಸ್ತಬ್ಧಗೊಳ್ಳುತ್ತಿರುವುದನ್ನು ವೈದ್ಯಜಗತ್ತು ಗಮನಿಸಲಾರಂಭಿಸಿತ್ತಷ್ಟೇ. ಶ್ರೀಯುತ. ಬಾಬು ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ಅದೇ ಶಂಕೆಯಿಂದ ವೈದ್ಯರು ತಪಾಸಣೆ ಮಾಡಲಾಗಿ ಜೀರ್ಣಾಂಗದ ಮುಖ್ಯ ಅಪಧಮನಿಯಲ್ಲಿ ರಕ್ತಹೆಪ್ಪುಗಟ್ಟಿದ್ದು ಕಂಡುಬಂತು. ಮೊದಲಿಗೆ ಔಷಧಿಗಳ ಮೂಲಕ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೋಗಲಾಡಿಸಲು ಪ್ರಯತ್ನಿಸಲಾಯಿತು. ಚಿಕಿತ್ಸೆಯ ಆಂಶಿಕ ಯಶಸ್ಸಿನಿಂದಾಗಿ ರೋಗಿ ಬದುಕುಳಿಯುವಂತಾದರೂ ಅವರ ಹೊಟ್ಟೆ ನೋವು ಶಮನವಾಗಲಿಲ್ಲ್ಲ. ಬೇರೆ ಉಪಾಯ ಕಾಣದೆ ಕೊರೋನಾದಿಂದ ಬಳಲುತ್ತಿದ್ದ ರೋಗಿಯನ್ನೇ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅನಿವಾರ್ಯವಾಯಿತು. ಶಸ್ತ್ರಕ್ರಿಯೆಯ ವೇಳೆ ಕರುಳಿನ 60% ಕ್ಕಿಂತಲೂ ಹೆಚ್ಚಿನ ಭಾಗ ರಕ್ತ ಪೂರೈಕೆಯ ಅಭಾವದಿಂದ ಕೆಟ್ಟುಹೋಗಿರುವುದು ಕಂಡು ಬಂತು. ಸಾಮಾನ್ಯವಾಗಿ ಕರುಳಿನ ಇಷ್ಟುದೊಡ್ಡ ಭಾಗ ನಿಷ್ಕ್ರಿಯವಾದಾಗ ಆ ರೋಗಿ ಬದುಕುಳಿಯುವುದು ಕಷ್ಟ ಸಾಧ್ಯ. ಬದುಕಿದರೂ ಆಹಾರ ಪಚನಕ್ರಿಯೆಯ ಅಸಮರ್ಪಕತೆಯಿಂದ ರೋಗಿ ಕ್ರÀಮೇಣ ಕ್ಷೀಣಿಸುತ್ತಾನೆ. ಅದೇನಿದ್ದರೂ, ಅವರನ್ನು ಉಳಿಸಿಕೊಳ್ಳಲೇ ಬೇಕೆಂಬ ಅವರ ಕುಟುಂಬದ ದೃಢ ನಿಶ್ಚಯಕ್ಕೆ ಪೂರಕವಾಗಿ ಕೆಟ್ಟು ಹೋಗಿದ್ದ ಕರುಳಿನ ಬಾಗವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆಯಲಾಯಿತು. ಪೂರಕ ಚಿಕಿತ್ಸೆ ಮುಂದುವರೆಸಲಾಯಿತು.

ತನ್ನವರ ಹಾರೈಕೆಯಿಂದಲೋ, ದೈವಕೃಪೆಯಿಂದಲೋ ಎಂಬಂತೆ ರೋಗಿ ಕ್ರಮೇಣ ಚೇತರಿಸಿಕೊಂಡು ಆಹಾರ ಸೇವಿಸಲಾರಂಭಿü ಸಿದರು. ಮೊದಲೇ ನಿರೀಕ್ಷಿಸಿದಂತೆ ಶಸ್ತ್ರಕ್ರಿಯೆಯ ಗಾಯ ವಾಸಿಯಾಗುವಲ್ಲಿನ ವಿಳಂಬ, ಆಹಾರ ಪಚನಕ್ರಿಯೆಯ ಅಸಮರ್ಪಕತೆ ಇತ್ಯಾದಿಗಳಿಂದ ರೋಗಿ ಸುಧೀರ್ಘವಾಗಿ ಬಳಲಿದರೂ 2 ತಿಂಗಳ ಹೋರಾಟದ ನಂತರ ಮನೆಗೆ ಹೊರಟು ನಿಂತಾಗ ಅವರ ಶುಶ್ರೂಷೆ ನಡೆಸಿದ ಆಸ್ಪತ್ರೆಯ ಸಿಬ್ಬಂದಿ ವರ್ಗ ಸಂತಸಪಟ್ಟಿದ್ದು ಸುಳ್ಳಲ್ಲ್ಲ. ಎಲ್ಲ್ಲರಿಗೂ ಅದೊಂದು ಅವಿಸ್ಮರಣೀಯ ಕ್ಷಣವಾಗಿತ್ತು.

ಯಾವುದೇ ಹಂತದಲ್ಲೂ ಹತಾಶೆಗೊಳಗಾಗದೆ, ತಮಗೆಷ್ಟೇ ಆರ್ಥಿಕ ತೊಂದರೆ ಇದ್ದರೂ, ವೈದ್ಯರ ಪ್ರಯತ್ನಕ್ಕೆ ಒತ್ತಾಸೆಯಾಗಿ ನಿಂತ ಶ್ರೀ. ಬಾಬು ಅವರ ಕುಟುಂಬದ ಪ್ರಯತ್ನಕ್ಕೆ ಆ ಜವರಾಯನೇ ಬೆದರಿದನೆಂದರೂ ತಪ್ಪಾಗಲಾರದು.


Spread the love