Home Mangalorean News Kannada News ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ; ರಾಜ್ಯದಲ್ಲಿರೋದು ಕರುಣೆ ಇಲ್ಲದ ಸರ್ಕಾರ: ಯುಟಿ ಖಾದರ್

ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ; ರಾಜ್ಯದಲ್ಲಿರೋದು ಕರುಣೆ ಇಲ್ಲದ ಸರ್ಕಾರ: ಯುಟಿ ಖಾದರ್

Spread the love

ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ; ರಾಜ್ಯದಲ್ಲಿರೋದು ಕರುಣೆ ಇಲ್ಲದ ಸರ್ಕಾರ: ಯುಟಿ ಖಾದರ್

ಕೊಪ್ಪಳ: ನಿತ್ಯ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚುತ್ತಿವೆ. ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂತ್ಯಸಂಸ್ಕಾರದಲ್ಲೂ ಸರ್ಕಾರ ಸಂಸ್ಕಾರ ಮರೆತು ವರ್ತಿಸುತ್ತಿದೆ. ಹಾಗಾಗಿ ರಾಜ್ಯದಲ್ಲಿರೋದು ಮಾನವೀಯತೆ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿಯ ಕೊರೋನಾದಲ್ಲೂ ಭ್ರಷ್ಟಾಚಾರ, ಬಿಜೆಪಿ ಸರಕಾರದ ಸಂಸ್ಕಾರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದೆ. ಸಂಶಯಾಸ್ಪದ ನಡೆಯಿಂದ ಹಗರಣ ಆಗಿರುವುದು ಬಹುತೇಕ ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಒಪ್ಪದ ರಾಜ್ಯ ಸರಕಾರದ ನಾಲ್ಕೈದು ಮಂತ್ರಿಗಳು ಡೈಲಾಗ್ ಹೊಡೆದದ್ದೇ ಸಾಧನೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಸ್ವಚ್ಛ, ಪಾರದರ್ಶಕ ಸರಕಾರ ನಡೆಸಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಜನರಿಗೆ ಕೊರೊನಾ ನಿಯಂತ್ರಣ, ನಿರ್ವಹಣೆಯ ಲೆಕ್ಕಾಚಾರ ಜನರಿಗೆ ತಿಳಿಸಬೇಕು. ಕ್ವಾಲಿಟಿ ಇಲ್ಲದ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಡಾಕ್ಟರ್, ವೈದ್ಯಕೀಯ ಸಿಬ್ಬಂದಿಗೆ ನೀಡಿದ ಸರಕಾರದ ವಿರುದ್ಧ ಡಾಕ್ಟರ್ಸ್, ನರ್ಸ್‌ಗಳು, ಆಶಾ‌ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಆದರೂ ಸರಕಾರಕ್ಕೆ ಕಿಂಚಿತ್ತೂ ನಾಚಿಕೆ ಇಲ್ಲ ಎಂದು ದೂರಿದರು.

ಲಾಕ್‌ಡೌನ್ ವೇಳೆ ಸರಕಾರಕ್ಕೆ ಪ್ರತಿಪಕ್ಷದವರು ಸಹಕಾರ ನೀಡಿದ್ದೇವೆ. ರಾಜ್ಯದ ಜನರು ಬದುಕಬೇಕೆಂದರೆ ದೇವರೇ ಕಾಪಾಡಬೇಕು ಅಂತ ಆರೋಗ್ಯ ಮಂತ್ರಿಗಳೇ ಕೈ ಚೆಲ್ಲುತ್ತಾರೆ. ಮಾಡಿರುವ ಹಗರಣವನ್ನು ಸರಕಾರ ಒಪ್ಪಲೇಬೇಕು. ತನಿಖೆಗೂ ಸರಕಾರ ಒಪ್ಪಬೇಕು. ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಆರೋಪ ಬಂದ ಪ್ರತಿ ಬಾರಿಯೂ ಪ್ರತಿಪಕ್ಷದ ಬೇಡಿಕೆಗೆ ಸ್ಪಂದಿಸುತ್ತಿತ್ತು. ಬಿಜೆಪಿ ಸರಕಾರ ನಿಮ್ಮ ಅವಧಿಯಲ್ಲಿ ಹೀಗಾಗರಲಿಲ್ಲವೇ? ಎಂದು ಹೇಳುವ ಮೂಲಕ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಆದರೆ ಮಾಡಿರುವ ತಪ್ಪನ್ನು ಸರಿಪಡಿಸಲು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿ ಕಾರಿದರು.

ಈ ಸರಕಾರ ಆರೋಪಗಳನ್ನು ಸಹಿಸುತ್ತಿಲ್ಲ, ಸಹಕಾರವನ್ನು ನೀಡುತ್ತಿಲ್ಲ. ಸರಿಯಾದ ಆಡಳಿತ ನಡೆಸಲು ಪ್ರತಿಪಕ್ಷದವರು ನೀಡುತ್ತಿರುವ ಇಂಜೆಕ್ಷನ್ ಇದು. ಅಂದಾಗ ಆರೋಗ್ಯಯುತ ಸರಕಾರ ಇರುತ್ತದೆ. ಕಾಯಿಲೆ‌ ಹೆಚ್ಚುತ್ತಿರುವುದಕ್ಕೆ, ಸಾವು ಹೆಚ್ಚುತ್ತಿರುವುದಕ್ಕೆ, ಅಮಾನವೀಯ ಶವಸಂಸ್ಕಾರಕ್ಕೆ ಸರಕಾರದ ನಿರ್ವಹಣೆ ಕೊರತೆ ಕಾರಣ.
ಮಂತ್ರಿಗಳ ನಡುವೆ ಇರುವ ಆಂತರಿಕ ರಾಜಕೀಯ ಗೊಂದಲದಿಂದ ಜನರು‌ ಯಾಕೆ ಶಿಕ್ಷೆ ಅನುಭವಿಸಬೇಕು? ಎಂದು ಅವರು ಪ್ರಶ್ನಿಸಿದರು.

ಕಳೆದ ಮೂರು ತಿಂಗಳಲ್ಲಿ ಕೊರೋನಾಗೆ ಸಂಬಂಧಿಸಿದಂತೆ ಎಷ್ಟು ಆದೇಶಗಳನ್ನು ಸರಕಾರ ಹೊರಡಿಸಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಪಕ್ಷ, ರಾಜ್ಯ ಸರಕಾರದ ಈ ಧೋರಣೆಯನ್ನು ಖಂಡಿಸುತ್ತದೆ. ಜನರ ಕಷ್ಟ ಅರಿಯಲು ಪ್ರತಿ ಜಿಲ್ಲೆಯಲ್ಲೂ ಕೆಎಎಸ್ ಅಧಿಕಾರಿಗಳ ಸಮೇತ ಸಮಿತಿ‌ ಮಾಡಲಿ. ಐಎಎಸ್ ಅಧಿಕಾರಿ ಕಮಿಟಿಯ ನೇತೃತ್ವ ವಹಿಸಲಿ. ವೆಂಟಿಲೇಟರ್ ಸಂಜೀವಿನಿ ಅಲ್ಲ. ಸಾವು-ಬದುಕು ದೇವರ ಕೈಯಲ್ಲಿದೆ ಎಂದು ಖಾದರ್ ಪ್ರತಿಪಾದಿಸಿದರು.

 ಮಾಜಿ ಸಚಿವೆ ಉಮಾಶ್ರೀ, ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ,   ಕಾಂಗ್ರೆಸ್ ಮುಖಂಡರಾದ ರಾಜಶೇಖರ ಹಿಟ್ನಾಳ, ರಡ್ಡಿ ಶ್ರೀನಿವಾಸ, ಮಾಲತಿ ನಾಯಕ್, ಆಸೀಫ್ ಅಲಿ, ಹಸನಸಾಬ ದೋಟಿಹಾಳ, ಕಾಟನ್ ಪಾಷಾ, ರವಿ‌ ಕುರಗೋಡ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.


Spread the love

Exit mobile version