ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ

Spread the love

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ

ಮಂಗಳೂರು: ಬೆಳ್ತಂಗಡಿಯಕಳಿಯ ಗ್ರಾಮದಲ್ಲಿ 2017ರಲ್ಲಿ ನಡೆದಿದ್ದ ಟಿಪ್ಪರ್ ಚಾಲಕ  ಗುರುವಾಯನಕೆರೆ ಕುವೆಟ್ಟು ಗ್ರಾಮದ ಶಿವಾಜಿನಗರದ ಪ್ರದೀಪ್(36) ಎಂಬವರ ಕೊಲೆ ಪ್ರಕರಣದ ಆರೋಪಿ ಮೊಡಂತ್ಯಡ್ಕ ನ್ಯಾಯತರ್ಪು ನಿವಾಸಿ ದಿನೇಶ್(32) ಎಂಬಾತನಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸೋಮವಾರ ತೀರ್ಪು ನೀಡಿದೆ.


ದಿನಾಂಕ: 24.11.2017 ರಂದು ಆರೋಪಿ ದಿನೇಶ ಎಂಬಾತನು ತನ್ನ ಟಿಪ್ಪರ್‌ ಲಾರಿಯಲ್ಲಿ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ರೇಷ್ಮೆ ರೋಡ್‌ ಬಳಿ ಮಧ್ಯಾಹ್ನ 13.30 ಗಂಟೆಗೆ ಬಂದಾಗ ಪ್ರದೀಪ ಎಂಬಾತನನ್ನು ಕಂಡು ಪೂರ್ವದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಪ್ರದೀಪನನ್ನು ಕೈ ಸನ್ನೆ ಮಾಡಿ ಟಿಪ್ಪರ್ ಲಾರಿ ಬಳಿ ಕರೆದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಲಿವರ್‌ ನಿಂದ ಪ್ರದೀಪನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹರೀಶ್ ಎಂಬವರು ನೀಡಿದ ದೂರಿನಂತೆ ಅಪರಾಧ ಕ್ರಮಾಂಕ 217/2017 ಕಲಂ: 302 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ಆ ಸಮಯದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿರವರು ತನಿಖೆ ನಡೆಸಿ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಪ್ರಕರಣವು ಮಂಗಳೂರು ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ದಿನೇಶ್ (32) ತಂದೆ ಸಂಜೀವ ಪೂಜಾರಿ, ವಾಸ ಮೊಡಂತ್ಯಾರಡ್ಡ ಮನೆ, ನ್ಯಾಯತರ್ಪು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬಾತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 10,000/- ರೂ ದಂಡವನ್ನು ವಿಧಿಸಿರುತ್ತದೆ.

ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಪ್ರಸ್ತುತ ವೇಣೂರು ಠಾಣಾ ಎ ಎಸ್ ಐ ವೆಂಕಟೇಶ್ ನಾಯ್ಕ್ ರವರು ಸಹಕರಿಸಿದ್ದು, ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀ ಶೇಖರ್ ಶೆಟ್ಟಿ ಮತ್ತು ಶ್ರೀ ಮತಿ ಜುಡಿತ್ ಕ್ರಾಸ್ತಾ ರವರು ವಾದ ಮಂಡಿಸಿರುತ್ತಾರೆ.


Spread the love