ಕೊಲೆ ಮಾಡಲೆಂದೇ ಸೀಲ್ ಡೌನ್ ಮಾಡಿದ್ದಾರೆ – ಉದಯ್ ಗಾಣಿಗ ಪತ್ನಿ ಜ್ಯೋತಿ ಗಂಭೀರ ಆರೋಪ

Spread the love

ಕೊಲೆ ಮಾಡಲೆಂದೇ ಸೀಲ್ ಡೌನ್ ಮಾಡಿದ್ದಾರೆ – ಉದಯ್ ಗಾಣಿಗ ಪತ್ನಿ ಜ್ಯೋತಿ ಗಂಭೀರ ಆರೋಪ

ಕುಂದಾಪುರ: ನನ್ನ ಪತಿಯನ್ನು ಕೊಲೆ ಮಾಡುವುದಕ್ಕೋಸ್ಕರವೇ ಅನಿವಾರ್ಯವಿಲ್ಲದಿದ್ದರೂ ಸೀಲ್‌ಡೌನ್ ಮಾಡಿದ್ದಾರೆ. ಕೊಲೆಗೆ ಸ್ಕೆಚ್ ಹಾಕಿಯೇ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಮಾಡಿದ್ದಾರೆ. ವೈಯಕ್ತಿದ ದ್ವೇದಿಂದಾಗಿ ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಉದಯ್ ಗಾಣಿಗ ಪತ್ನಿ ಜ್ಯೋತಿ ಆರೋಪಿಸಿದ್ದಾರೆ.

ಕೊಳವೆ ಬಾವಿ ಪರವಾನಿಗೆ ವಿಚಾರದಲ್ಲಿ ಉಂಟಾದ ಗಲಾಟೆಯಲ್ಲಿ ಸ್ಥಳೀಯ ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷನಿಂದ ಶನಿವಾರ ರಾತ್ರಿ ಕೊಲೆಯಾಗಿದ್ದು ಆತನ ಪತ್ನಿ ಜ್ಯೋತಿ ಮಾಧ್ಯಮಗಳ ಮುಂದೆ ತನ್ನ ನೋವನ್ನು ತೋಡಿಕೊಂಡರು.

ಪ್ರಾಣೇಶ್ ಯಡಿಯಾಳ, ಬಾಲಚಂದ್ರ ಭಟ್, ರಾಜೇಶ್ ಭಟ್ ಮತ್ತಿತರರು ಸೇರಿ ಹೊಂಚು ಹಾಕಿ ಕೊಲೆ ನಡೆಸಿದ್ದಾರೆ. ಬೋರ್‌ವೆಲ್ ಎನ್‌ಓಸಿ ವಿಚಾರದಲ್ಲೂ ತುಂಬಾ ಕಿರಿಕಿರಿ ಮಾಡಿದ್ದರು. ನಾನು ಪ್ರಾಣೇಶ್ ಯಡಿಯಾಳ್ ಅವರ ಹತ್ತಿರ ಮಾತನಾಡಿ ಬರುತ್ತೇನೆ ಎಂದು ಹೋದವರು ಮನೆಗೆ ಬರಲಿಲ್ಲ. ಉದಯ್ ಗಾಣಿಗನನ್ನು ನಾವು ತೆಗೆಯುತ್ತೇವೆ ಅವನಲ್ಲಿ ಜಾಗ್ರತೆಯಿಂದ ಇರಲು ಹೇಳಿ ಎಂದು ಹದಿನೈದು ದಿನಗಳ ಹಿಂದೆ ಬೇರೆಯವರ ಹತ್ತಿ ಹೇಳಿ ಕಳುಹಿಸಿದ್ದರು. ಮಾವನ ಹೆಸರಲ್ಲಿ ಎನ್‌ಓಸಿ ಕೊಡಬಾರದು ಅಂತ ಪ್ರಾಣೇಶ್ ಯಡಿಯಾಳನೆ ತಡೆ ಅರ್ಜಿ ಹಾಕಿ ಅಪ್ಪ ಮಗನ ಮಧ್ಯೆ ಜಗಳ ತಂದಿಡಲು ಪ್ರಯತ್ನಿಸಿದ್ದ ಎಂದು ಉದಯ್ ಪತ್ನಿ ಜ್ಯೋತಿ ಕಣ್ಣಿರು ಹಾಕುತ್ತಾ ಪತಿಯ ಕೊಲೆಗಾರರಿಗೆ ಶಿಕ್ಷೆ ಕೊಡಿಸಿ ಎಂದು ಕೈಮುಗಿದು ಬೇಡುವ ದೃಶ್ಯ ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿತು.

ಜಡ್ಕಲ್‌ನಲ್ಲಿ ಕೃಷಿ ಗೊಬ್ಬರದ ಅಂಗಡಿ ನಡೆಸುತ್ತಿದ್ದ ಯಡಮೊಗೆ ಹೊಸಬಾಳು ನಿವಾಸಿ ಉದಯ್ ಗಾಣಿಗ (45) ಕೊಲೆಯಾದ ದುರ್ದೈವಿ. ಉದಯ್ ಪತ್ನಿ ಜ್ಯೋತಿ ಶಂಕರನಾರಾಯಣ ಪೊಲೀಸರಿಗೆ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಎನ್ನಲಾಗಿರುವ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ. ಎರಡನೇ ಆರೋಪಿ ಪ್ರಾಣೇಶ್ ಸ್ನೇಹಿತ ರಾಜೇಶ್ ಭಟ್ ಹಾಗೂ ಮೂರನೇ ಆರೋಪಿ ಬಾಲಚಂದ್ರ ಭಟ್ ಅವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೋರ್‌ವೆಲ್‌ ಗೆ ಎನ್‌ಓಸಿ ನೀಡಲು ತಕರಾರು:

ಕಳೆದ ಕೆಲ ತಿಂಗಳುಗಳಿಂದ ಕೊಳವೆ ಬಾವಿ ಕೊರೆಸಲು ಪಂಚಾಯತ್‌ನಿಂದ ಎನ್‌.ಓ.ಸಿ ಪಡೆಯಲು ಉದಯ್ ಅರ್ಜಿ ನೀಡಿದ್ದರು. ಆದರೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಎನ್‌ಓಸಿ ನೀಡಲು ಸತಾಯಿಸುತ್ತಿದ್ದರು ಎನ್ನಲಾಗಿದೆ. ಬೆಂಬಿಡದ ಉದಯ್ ಮತ್ತೆ ಮತ್ತೆ ಪಂಚಾಯತ್‌ಗೆ ಹೋಗಿ ಎನ್‌ಓಸಿ ನೀಡಲು ಮನವಿ ಮಾಡಿಕೊಂಡ ಬಳಿಕ ಸಾಕಷ್ಟು ಸತಾಯಿಸಿ ಅವರಿಗೆ ಎನ್‌ಓಸಿ ಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಗಲಾಟೆ ದ್ವೇಷಕ್ಕೆ ತಿರುಗಿ ಉದಯ್ ಗಾಣಿಗ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಶನಿವಾರ ರಾತ್ರಿ ನಡೆದದ್ದೇನು?:
ಉದಯ್ ಗಾಣಿಗ ತಮ್ಮ ಮನೆಯಲ್ಲಿದ್ದ ವೇಳೆಯಲ್ಲಿ ಅವರಿಗೆ ಕರೆ ಬಂದಿತ್ತು. ಕರೆ ಬಂದ ಬಳಿಕ ಅವರು ನನ್ನನ್ನು ಮಾತನಾಡಲು ರಸ್ತೆ ಹತ್ತಿರ ಬರಲು ಹೇಳಿದ್ದಾರೆ ಹೋಗಿ ಬರುತ್ತೇನೆ ಎಂದು ಮನೆಯಿಂದ ತೆರಳಿದ್ದಾರೆ. ಮನೆಯವರು ಹೋಗುವುದು ಬೇಡವೆಂದರೂ ಮನೆಯವರ ಮಾತು ಕೇಳದೆ ತನ್ನ ಬೈಕ್ ಅನ್ನು ಏರಿ ಹೊರಟ ಉದಯ್ ಕೊನೆಗೂ ಮನೆಗೆ ಮರಳಿದ್ದು ಹೆಣವಾಗಿ. ತಮ್ಮ ಮನೆಯ ಸಮೀಪದ ಅನತಿ ದೂರದ ಹೊಸಬಾಳು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ರಸ್ತೆ ಬದಿ ನಿಂತಿದ್ದ ಉದಯ್ ಗಾಣಿಗ ಅವರ ಮೇಲೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಅವರು ಏಕಾಏಕಿಯಾಗಿ ಕಾರು ಹರಿಸಿದ್ದಾರೆ ಎನ್ನಲಾಗಿದೆ. ಆ ಬಳಿಕ ನೆಲಕ್ಕುರುಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ಮೇಲೆ ಅದೇ ಗುಂಪು ದೊಣ್ಣೆಯಿಂದ ಹೊಡೆದು ಪರಾರಿಯಾಗಿದೆ.

ಬಚ್ಚು ನಾಯ್ಕ್ ಅವರಲ್ಲಿ ಉದಯ್ ಹೇಳಿದ್ದೇನು?
ಉದಯ್ ಗಾಣಿಗ ತಮ್ಮ ಕೃಷಿ ಗೊಬ್ಬರದ ಅಂಗಡಿಗೆ ತೆರಳಲು ಹೋದಾಗ ಸೀಲ್‌ಡೌನ್ ಮಾಡಿರುವ ಪ್ರದೇಶದಲ್ಲಿ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರು ಅವರನ್ನು ಮುಂದಕ್ಕೆ ಹೋಗದಂತೆ ಶನಿವಾರ ತಡೆದಿದ್ದರು. ಈ ವೇಳೆಯಲ್ಲಿ ಅವರಿಗೂ ಹಾಗೂ ಉದಯ್ ಗಾಣಿಗರ ಮಧ್ಯೆ ಮಾತಿನಚಕಮಕಿ ಉಂಟಾಗಿ ಮತ್ತೆ ಉದಯ್ ಮನೆಗೆ ವಾಪಾಸಾಗಿದ್ದರು. ಮನೆಗೆ ಬಂದು ಕೆಲ ಗಂಟೆಯ ಬಳಿಕ ಉದಯ್ ಅವರಿಗೆ ಕರೆ ಮಾಡಿ ರಸ್ತೆ ಸಮೀಪ ಬರಲು ಹೇಳಿದ್ದರು. ಈ ವೇಳೆ ಉದಯ್ ಸ್ಥಳೀಯ ನಿವಾಸಿ ಬಚ್ಚು ನಾಯ್ಕ್ ಅವರಿಗೆ ಕರೆ ಮಾಡಿ ಅವರು ಮಾತನಾಡುದಕ್ಕಿದೆ ಎಂದು ನನ್ನನ್ನು ಬರಲು ಹೇಳಿದ್ದಾರೆ, ನಾನು ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಕರೆ ಕಟ್ ಮಾಡಿದ್ದಾರೆ. ತಕ್ಷಣವೇ ಇದೊಂದು ದೊಡ್ಡ ಗಲಾಟೆಯಾಗುವ ಮುನ್ಸೂಚನೆ ಇದೆ ಎನ್ನುವ ಆಲೋಚನೆಯಲ್ಲಿ ಕೂಡಲೇ ಉದಯ್ ಹೋಗಿರುವ ಸ್ಥಳಕ್ಕೆ ಧಾವಿಸುವ ಮಾರ್ಗಮಧ್ಯೆ ಸೇತುವೆ ಮೇಲೆ ಐದಾರು ಕಾರು ಹಾಗೂ ಬೈಕ್ ನಿಲ್ಲಿಸಿಕೊಂಡ 25 ಮಂದಿಯ ತಂಡ ನಿಂತುಕೊಂಡಿತ್ತು. ಇದನ್ನು ಗಮನಿಸಿದ ನಾನು ಘಟನಾ ಸ್ಥಳಕ್ಕೆ ತೆರಳಿದಾಗ ಉದಯ್ ಗಾಣಿಗ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ನನ್ನ ಆಮ್ನಿ ಕಾರಿನಲ್ಲೇ ಮಲಗಿಸಿ ಕರೆಕಟ್ಟೆ ತನಕ ಸಾಗಿಸಿ ಆ ಬಳಿಕ 108 ಆಂಬುಲೆನ್ಸ್ನಲ್ಲಿ ಸಾಗಿಸಿ ವಾಪಾಸಾದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಈ ಕೃತ್ಯದ ಹಿಂದೆ ಹಲವು ಮಂದಿ ಇದ್ದಾರೆ. ಅವರೆಲ್ಲರಿಗೂ ಶಿಕ್ಷೆಯಾಗಲಿ ಎಂದು ಬಚ್ಚು ನಾಯ್ಕ್ ಆಗ್ರಹಿಸಿದ್ದಾರೆ.

ಊರಿಗೆ ಬೇಲಿ ಹಾಕಿ ಪೋಸ್ ಕೊಡಬೇಡಿ!
ಕೇವಲ 20ರಿಂದ 25ರಷ್ಟು ಪಾಸಿಟಿವ್ ಪ್ರಕರಣಗಳಿರುವ ಯಡಮೊಗೆ ಪಂಚಾಯತ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಯಡಮೊಗೆ ಪ್ರವೇಶ ದ್ವಾರದಲ್ಲಿ ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ಪಂಚಾಯತ್ ಸದಸ್ಯರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಕುರ್ಚಿ ಮೇಲೆ ಕೂತು ಫೋಟೋ ಕ್ಲಿಕ್ಕಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ವಿಚಾರವಾಗಿ ಉದಯ್ ಧ್ವನಿ ಎತ್ತಿದ್ದರು. ಹೆಚ್ಚು ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೂ ಸೀಲ್‌ಡೌನ್ ಮಾಡಿ ಬಡವರ, ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಂದೊಡ್ಡುವ ಪಂಚಾಯತ್‌ನ ಸವಾಧಿಕಾರಿ ನೀತಿಯ ವಿರುದ್ದ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಎರಡು ದಿನಗಳ ಹಿಂದಷ್ಟೇ ಬರೆದುಕೊಂಡಿದ್ದರು. “ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಮೊದಲು ಯಡಮೊಗೆಯಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಸಿಗುವ ಹಾಗೆ ಮಾಡಿ. ಆಸ್ಪತ್ರೆಗೆ ಬೆಡ್ ವ್ಯವಸ್ಥೆ ಮಾಡಿ, ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸೇರಿಸಿ ಗುಣಮುಖರಾದವರನ್ನು ಮನೆಗೆ ಕಳುಹಿಸಿಕೊಡಿ. ಬಡ ಕೂಲಿ ಕಾರ್ಮಿಕರು ಊಟಕ್ಕೆ ಏನು ಮಾಡುತ್ತಿದ್ದಾರೆ ಅವರ ಸಮಸ್ಯೆಗಳನ್ನು ವಿಚಾರಿಸಿ. ಇದನ್ನು ಬಿಟ್ಟು ಊರಿಗೆ ಬೇಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಬೇಡಿ. ಇದರಿಂದ ಸರ್ಕಾರದ ಹಣ ನುಂಗಿ ನೀರು ಕುಡಿಯುವುದು ಬಿಟ್ಟು ಬೇರೇನು ಪ್ರಯೋಜನವಿಲ್ಲ” ಈ ಬರಹವನ್ನು ಉದಯ್ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು.

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಕುಮಾರ ಚಂದ್ರ, ಡಿವೈಎಸ್ ಪಿ ಶ್ರೀಕಾಂತ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಶಂಕರನಾರಾಯಣ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಙರು ಘಟನಾ ಸ್ಥಳಕ್ಕೆ ಆಗಮಿಸಿ ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.


Spread the love