ಕೊಲ್ಲೂರಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಡಿಪೋ ಎದುರು ಧರಣಿ: ಎಬಿವಿಪಿ ಎಚ್ಚರಿಕೆ

Spread the love

ಕೊಲ್ಲೂರಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಡಿಪೋ ಎದುರು ಧರಣಿ: ಎಬಿವಿಪಿ ಎಚ್ಚರಿಕೆ

ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರು ದೇವಸ್ಥಾನಕ್ಕೆ ಮತ್ತು ದೇವಸ್ಥಾನದ ಮಾರ್ಗವಾಗಿ ಕುಂದಾಪುರದಿಂದ ಇದುವರೆಗೂ ಯಾವುದೇ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸದಿರುವುದು ದುರಂತ. ಬಸ್ ವ್ಯವಸ್ಥೆ ಇಲ್ಲದೇ ಈ ಭಾಗದ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಲೂಕು ಮಟ್ಟದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನಿಂದ 5,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಡಿಪೋ ಮುಂದೆ ಧರಣಿ ಮಾಡಿ ಕೆ.ಎಸ್.ಆರ್.ಟಿ.ಸಿ ಎಲ್ಲಾ ಮಾರ್ಗದ ಬಸ್‍ಗಳನ್ನು ತಡೆಹಿಡಿಯುತ್ತೇವೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.


ಅವರು ಕೆರಾಡಿ ಬೆಳ್ಳಾಲ ಕುಂದಾಪುರ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಕಲ್ಪಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರದ ವತಿಯಿಂದ ಇಲ್ಲಿನ ಮಿನಿವಿಧಾನಸೌಧದ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಈ ಮಾರ್ಗದಲ್ಲಿ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳಲು ದಿನ ನಿತ್ಯವೂ ಹಣ ನೀಡಿ ಹೋಗಬೇಕಾದ ಪರಿಸ್ಥಿತಿ ಇದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿ ದಿನಂಪ್ರತಿ ಬಸ್ಸನ್ನು ಅವಲಂಬಿಸಿ ಸುಮಾರು 1000 ದಿಂದ 2000 ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕೊಲ್ಲೂರಿನಿಂದ ಹೊರಟು ಕುಂದಾಪುರದವರೆಗೂ ಸಹ ಅನೇಕ ವಿದ್ಯಾಸಂಸ್ಥೆಗಳಿಗೆ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ, ಇಲ್ಲಿ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದಿರುವುದು ದುರಂತ ಎಂದರು.

ಸರಕಾರವು ಕೊಲ್ಲೂರಿನಂತಹ ಪ್ರಸಿದ್ಧ ಸ್ಥಳಕ್ಕೆ ಇಂದಿಗೂ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡದೇ ಇರುವುದು ಒಂದು ಅತ್ಯಂತ ಗಂಭೀರವಾದ ಹಾಗೂ ಮುಜುಗರದ ವಿಷಯವಾಗಿದೆ. ಕೆರಾಡಿ ಮಾರ್ಗದಲ್ಲಿ ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ 400 ವಿದ್ಯಾರ್ಥಿಗಳು, ಮಾರಣಕಟ್ಟೆ -ಕುಂದಾಪುರ ಮಾರ್ಗದಲ್ಲಿ 500 ಮತ್ತು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಪರವಾನಗಿ ಇದ್ದರೂ ಸಹ ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಇದುವರೆಗೂ ಸಂಚರಿಸುತ್ತಿಲ್ಲ. ಈ ಸಮಸ್ಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಶಾಸಕರು ಕೂಡ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ತಾಲೂಕು ವಿದ್ಯಾರ್ಥಿ ಪ್ರಮುಖರಾದ ಧ್ವನಿ, ಭಂಡಾರ್ಕಾಸ್ ಕಾಲೇಜಿನ ನಾಗೇಶ್, ಶ್ರೀನಿಧಿ, ಬಿ.ಬಿ ಹೆಗ್ಡೆ ಕಾಲೇಜಿನ ಅನುಷಾ, ಧನುಷ್, ಬಸ್ರೂರು ಶಾರದಾ ಕಾಲೇಜಿನ ರಂಜಿತ್,ದೀಪಾ, ಕೋಟೇಶ್ವರ ಸರ್ಕಾರಿ ಪದವಿ ಕಾಲೇಜಿನ ಅಭಿಷೇಕ್, ಆರ್.ಎನ್ ಶೆಟ್ಟಿ ಕಾಲೇಜಿನ ನಿತಿನ್ ಮೊದಲಾದವರು ಉಪಸ್ಥಿತರಿದ್ದರು.


Spread the love