ಕೊಲ್ಲೂರಿನಲ್ಲಿ ಶತ‌ ಚಂಡಿಕಾ ಯಾಗದ ಪೂರ್ಣಾಹುತಿ 

Spread the love

ಕೊಲ್ಲೂರಿನಲ್ಲಿ ಶತ‌ ಚಂಡಿಕಾ ಯಾಗದ ಪೂರ್ಣಾಹುತಿ 

ಕುಂದಾಪುರ: ಕೊಲ್ಲೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಲೋಕ‌ ಕಲ್ಯಾಣಾರ್ಥವಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಚಂಡಿಕಾ ಪಾರಾಯಣ ಹಾಗೂ ಶತ ಚಂಡಿ ಮಹಾಯಾಗಕ್ಕೆ ಶುಕ್ರವಾರ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು.

ಕೊಲ್ಲೂರು ದೇವಳದ ಮೂರ್ತಿದಾರಕ ಮೂರ್ತಿ ಕಾಳಿದಾಸ ಭಟ್ ಅವರ ನಿವಾಸದಲ್ಲಿ ನಡೆದ ಶತ ಚಂಡಿ ಯಾಗಕ್ಕೆ ಋತ್ವಿಜರ ಮಂತ್ರ ಪಠಣದೊಂದಿಗೆ ಹೋಮ ಕುಂಡಕ್ಕೆ ವಿವಿಧ ಹವಿಸ್ಸುಗಳನ್ನು ಅರ್ಪಿಸುವ ಮೂಲಕ ಶುಕ್ರವಾರ ಮಧ್ಯಾಹ್ನ 11.45 ಕ್ಕೆ ಪೂರ್ಣಾಹುತಿ ನೀಡಲಾಯಿತು.

ಲೋಕ‌ ಕಲ್ಯಾಣಾರ್ಥವಾಗಿ ನಡೆದ ಯಾಗಕ್ಕೆ ಬೈಂದೂರು ಕ್ಷೇತ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ಗಣ್ಯರು ಹಾಗೂ ಭಕ್ತರು ಸಾಕ್ಷಿಯಾದರು.

ರಾಜ್ಯದ ಕನ್ನಡ ಮತ್ತು‌ ಸಂಸ್ಕೃತಿ, ಇಂಧನ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಡಾ. ಅತುಲ್ ಕುಮಾರ್ ಶೆಟ್ಟಿ, ರತ್ನಾ ರಮೇಶ್ ಕುಂದರ್, ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಹಿಂದೂ ಸಂಘಟನೆ ಪ್ರಮುಖರಾದ ಟಿ. ಶಂಭು ಶೆಟ್ಟಿ, ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಬಿಜೆಪಿ ಮುಖಂಡರಾದ ರೋಹಿತ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ರೋಹಿತ್ ಕುಮಾರ್ ಶೆಟ್ಟಿ, ಇಂದಿರಾ ಶೆಟ್ಟಿ ಆಲೂರು, ಮಂಜು ಬಿಲ್ಲವ, ಸಾಮ್ರಾಟ್ ಶೆಟ್ಟಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮೊದಲಾದವರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು, ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುವ ಸೇವೆಗಳಲ್ಲಿ ಚಂಡಿಕಾ ಯಾಗ ದೊಡ್ಡ ಸೇವೆಯಾಗಿದೆ. ನಾಡಿಗೆ ಹಾಗೂ ರಾಷ್ಟ್ರಕ್ಕೆ ಸುಭೀಕ್ಷವಾಗಲಿ ಎನ್ನುವ ನಿಟ್ಟಿನಲ್ಲಿ ಸಂಕಲ್ಪದೊಂದಿಗೆ ಯಾಗ ನಡೆಸಲಾಗಿದೆ. ಈ ಹಿಂದೆಯೂ ಹೇಳಿದಂತೆ ಯಾವುದೇ ಅಧಿಕಾರಕ್ಕಿಂತಲೂ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ಮಾಡುವ ಸೇವೆ ಪರಮಾಧಿಕಾರ ಎನ್ನುವ ಸಂತೃಪ್ತಿ ಇದೆ ಎಂದು ಅವರು ಹೇಳಿದ್ದಾರೆ.


Spread the love