
ಕೊಲ್ಲೂರು: ಚರಂಡಿಗೆ ಉರುಳಿ ಬಿದ್ದ ಬಸ್ಸು – ಓರ್ವ ಮೃತ್ಯು, ಹಲವರಿಗೆ ಗಾಯ
ಕುಂದಾಪುರ: ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಓರ್ವ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಲೂರು ಹಾಲ್ಕಲ್ ತಿರುವಿನ ಬಳಿ ಬುಧವಾರ ನಸುಕಿನ ಜಾವ ನಡೆದಿದೆ.
ಮೃತ ವ್ಯಕ್ತಿಯನ್ನು ಗದಗ ಶಿರಹಟ್ಟಿ ಮೂಲದ ಬಸವರಾಜ್(23) ಎಂದು ಗುರುತಿಸಲಾಗಿದೆ. ರಂಗಪ್ಪ, ಗೀರೀಶ್, ಮನೋಜ್ ಕುಮಾರ್, ಮಲ್ಲೇಶ್, ದೇವೇಂದ್ರಪ್ಪ, ಹಾಲಸ್ವಾಮಿ ಸಹಿತ ಇನ್ನಿತರರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು 35ರಿಂದ 40 ಪ್ರಯಾಣಿಕರಿದ್ದ ಖಾಸಗಿ ಬಸ್ ಚಿತ್ರದುರ್ಗಾದಿಂದ ಮಂಗಳೂರಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬುಧವಾರ ಮುಂಜಾನೆ ಸುಮಾರು 2.30 ಕ್ಕೆ ಕೊಲ್ಲೂರು ಹಾಲ್ಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಬಸ್ ಚರಂಡಿಗೆ ಉರುಳಿದ್ದು, ವಿದ್ಯುತ್ ಕಂಬ ಕೂಡ ಬಸ್ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಬಸವರಾಜ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಖಾಸಗಿ ಬಸ್ ಮಾಲೀಕರು ಹಾಗೂ ಸಿಬ್ಬಂದಿಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.
ಅಪಘಾತದಲ್ಲಿ ಗಾಯಗೊಂಡವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆ, ಕುಂದಾಪುರದ ಖಾಸಗಿ ಆಸ್ಪತ್ರೆ ಹಾಗೂ ಗಂಭೀರ ಗಾಯಗೊಂಡವರನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.