
ಕೊಲ್ಲೂರು ದೇವಸ್ಥಾನದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ದಂಪತಿಗಳಿಂದ ವಿಶೇಷ ಪೂಜೆ
ಕುಂದಾಪುರ: ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬುಧವಾರ ಬೆಳಿಗ್ಗೆ ಶ್ರೀ ಮೂಕಾಂಬಿಕಾ ದೇವಳದಲ್ಲಿ ಚಂಡಿಕಾಹೋಮ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಗೃಹ ಸಚಿವರು ಭಾಗಿಯಾಗಿದರು. ಪ್ರಧಾನ ಅರ್ಚಕ ಕೆ. ಎನ್ ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು. ದೇವಸ್ಥಾನದ ವತಿಯಿಂದ ಗೃಹಸಚಿವರನ್ನು ಗೌರವಿಸಲಾಯಿತು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್ ಕೊಲ್ಲೂರಿನಲ್ಲಿ ಪೂಜೆ ಸಲ್ಲಿಸಬೇಕು ಎನ್ನುವ ಸಂಕಲ್ಪ ಇತ್ತು ಹಾಗಾಗಿ ನಾನು ಮತ್ತು ನನ್ನ ಧರ್ಮಪತ್ನಿ ಜೊತೆಯಾಗಿ ಇಲ್ಲಿ ಬಂದಿದ್ದೇವೆ. ದೇವಳದಲ್ಲಿ ದೇವಿಯ ದರ್ಶನ ಉತ್ತಮ ನಡೆದಿದ್ದು, ತಾಯಿ ರಾಜ್ಯದಲ್ಲಿ ಶಾಂತಿ ನೆಲೆಸುವ ರೀತಿಯಲ್ಲಿ ಆಶೀರ್ವಾದ ಮಾಡಲಿ ಎಂದು ಬೇಡಿಕೊಂಡಿದ್ದೇನೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದ್ದು ಜನರ ನಿರೀಕ್ಷೆ ಮತ್ತು ಅಪೇಕ್ಷೆಗಳು ಬಹಳಷ್ಟು ಇದ್ದು ಅವುಗಳನ್ನ ಪೂರೈಸುವ ಶಕ್ತಿ ಕೊಡುವಂತೆ ತಾಯಿ ಮೂಕಾಂಬಿಕೆಯಲ್ಲಿ ಬೇಡಿಕೊಳ್ಳಲು ಬಳಿ ಬಂದಿದ್ದೇನು ಸರಕಾರಕ್ಕೆ ಶಕ್ತಿ ಕೊಡುವಂತೆ ಪ್ರಾರ್ಥೀಸಿದ್ದೇನೆ ಎಂದರು.
ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದ ಗೊಂದಲದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಈ ವಿಚಾರಲ್ಲಿ ಚರ್ಚೆ ಮಾಡಿ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಏಕಾಏಕಿಯಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವರಿವರು ಹೇಳಿಕೆ ಕೊಡುತ್ತಾರೆ ಎಂದ ಕ್ಷಣ ಅದೇ ಸರಕಾರದ ನಿರ್ಧಾರ ಎಂದು ಆಗುವುದಿಲ್ಲ. ನಾವೆಲ್ಲರೂ ಕುಳಿತುಕೊಂಡು ಯಾವುದು ಸರಿ ಅಂತ ಆಗುತ್ತದೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ಪಠ್ಯಪರೀಕ್ಷಣೆ ವಿಚಾರದಲ್ಲಿ ಯಾರಿಗೂ ಗೊಂದಲ ಸೃಷ್ಟಿಸುವ ಕೆಲಸಕ್ಕೆ ನಾವು ಹೋಗುವುದಿಲ್ಲ ಎಂದರು
ಗೃಹಲಕ್ಷ್ಮೀ ಅನುಷ್ಠಾನ ಕುರಿತಂತೆ ಜನರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಆದರೆ ಕೆಲವೊಂದಿಷ್ಟು ಜನ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ ನಾವು ಯಾವ ರೀತಿ ಭರವಸೆ ನೀಡಿದ್ದೆವು ಅದೇ ರೀತಿಯಲ್ಲಿ ಅನುಷ್ಠಾನವನ್ನು ಕೂಡ ಮಾಡುತ್ತೇವೆ. ಅನುಷ್ಠಾನದ ವೇಳೆಯಲ್ಲಿ ಸಣ್ಣಪುಟ್ಟ ವಿಚಾರಗಳಿದ್ದರೆ ಅದನ್ನು ದೊಡ್ಡದು ಮಾಡುವಂತದ್ದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ದೇವಳದ ಅರ್ಚಕರಾದ ರಾಮಚಂದ್ರ ಅಡಿಗ, ಕಾರ್ಯನಿರ್ವಹಣಾಧಿಕಾರಿ ರವಿ ಕೋಟಾರಗಸ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ, ರತ್ನಾ ರಮೇಶ್ ಕುಂದರ್ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಮೊದಲಾದವರಿದ್ದರು.