ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ದಾಖಲೆಯ ಹುಂಡಿ ಹಣ ಸಂಗ್ರಹ

Spread the love

ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ದಾಖಲೆಯ ಹುಂಡಿ ಹಣ ಸಂಗ್ರಹ

ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ ದೇಗುಲದಲ್ಲಿ ಬುಧವಾರ ಕಾಣಿಕೆ ಹುಂಡಿ ಹಣ ಲೆಕ್ಕಾಚಾರ ನಡೆದಿದ್ದು, ದಾಖಲೆಯ ಹಣ ಸಂಗ್ರಹವಾಗಿದೆ.

ಕಳೆದ 2 ತಿಂಗಳ ಅವಧಿಯಲ್ಲಿ ಭಕ್ತರಿಂದ 1.36 ಕೋಟಿ ರೂ. ಸಂಗ್ರವಾಗಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ -19 ರಿಂದಾಗಿ, ದೇಗುಲದಲ್ಲಿ ಭಕ್ತರ ಪ್ರವೇಶ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಆದಾಯಕ್ಕೆ ಕೊರತೆಯುಂಟಾಗಿತ್ತು. ಇದೀಗ ನಿರ್ಬಂಧ ಸಡಿಲಿಕೆಯಾಗಿದ್ದರಿಂದ ಕಳೆದ 2 ತಿಂಗಳಿನಿಂದ ಕೊಲ್ಲೂರು ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ವಿವಿಧ ಹರಕೆಯೊಡನೆ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನಾಭರಣ ಸಹಿತ ನಗದು ಸಮರ್ಪಿಸುತ್ತಿದ್ದಾರೆ ಎಂದು ದೇವಳದ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ.ಬಿ ಮಹೇಶ್ ತಿಳಿಸಿದ್ದಾರೆ.

ನ.10 ರಂದು ನಡೆದ ಕಾಣಿಕೆ ಹುಂಡಿ ಲೆಕ್ಕಾಚಾರದಲ್ಲಿ 585 ಗ್ರಾಂ ಚಿನ್ನ ಹಾಗೂ 6,400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 2020ನೇ ಸಾಲಿನ ನವರಾತ್ರಿ ವೇಳೆ ನಡೆದ ಲೆಕ್ಕಾಚಾರದಲ್ಲಿ 92,00,000 ರೂ., 615 ಗ್ರಾಂ ಚಿನ್ನ ಹಾಗೂ 3,500 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. 3 ವರ್ಷಗಳ ಹಿಂದೆ 3 ತಿಂಗಳ ಅವಧಿಯಲ್ಲಿ 1.11 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿದ್ದು ದಾಖಲಾಗಿದ್ದು. ಇದೀಗ ಕೇವಲ 52 ದಿನಗಳಲ್ಲಿ 1.36 ಕೋಟಿ ರೂ. ಸಂಗ್ರಹವಾಗಿರುವುದು ದಾಖಲೆಯಾಗಿದೆ.

ದೇಗುಲದಲ್ಲಿ ಆದಾಯ ಹಾಗೂ ಭಕ್ತರು ಹೆಚ್ಚಳವಾಗಿರುವ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು, ಕೋವಿಡ್ ಮಹಾಮಾರಿಯಿಂದಾಗಿ ಇಡೀ ಜಗತ್ತು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದೆ. 2ನೇ ಅಲೆ ಬಳಿಕ ಇದೀಗ ಜನಜೀವನ ಸುಧಾರಣೆಯಾಗುತ್ತಿದ್ದು, 3ನೇ ಅಲೆಯ ಆತಂಕ ಎಲ್ಲರಲ್ಲೂ ಮನೆಮಾಡಿದೆ. 3ನೇ ಅಲೆ ಬಾರದೆ ಜನರು ನೆಮ್ಮದಿಯಿಂದ ಜೀವಿಸುವಂತ ಅವಕಾಶಗಳು ಬರಲಿ ಎಂಬ ನಿಟ್ಟಿನಲ್ಲಿ ಜಗನ್ಮಾತೆ ಮೂಕಾಂಬಿಕೆಯಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ, ರತ್ನಾ ರಮೇಶ ಕುಂದರ್, ಕಾರ್ಯ ನಿರ್ವಾಹಣಾಧಿಕಾರಿ ಎಸ್. ಪಿ. ಬಿ ಮಹೇಶ್, ಉಪ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಇದ್ದರು.


Spread the love