
ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ
ಕುಂದಾಪುರ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಮುಜರಾಯಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್ ಮಂಗಳವಾರ ಆದೇಶ ಹೊರಿಡಿಸಿದೆ.
ಅ.21 ರಂದು ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಧಾರ್ಮಿಕ ಪರಿಷತ್ನ 9ನೇ ಸಭೆಯಲ್ಲಿ ರಾಜ್ಯದ ’ಎ’ ಅಧಿಸೂಚಿತ ದೇಗುಲವಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಮಂಗಳವಾರ ಹೊರಡಿಸಿರುವ ಆದೇಶದಲ್ಲಿ ಮುಂದಿನ 3 ವರ್ಷಗಳ ಅವಧಿಗೆ 9 ಜನ ಸದಸ್ಯರನ್ನು ಒಳಗೊಂಡಿರು ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ. ಪಾಳಿಯಲ್ಲಿ ಇರುವ ಅರ್ಚಕರಾಗಿ ಕೆ.ರಾಮಚಂದ್ರ ಅಡಿಗ, ಮಹಿಳಾ ಮೀಸಲಾತಿಯಲ್ಲಿ ರತ್ನಾ ರಮೇಶ್ ಕುಂದರ್ ಕೊಲ್ಲೂರು, ಸಂಧ್ಯಾ ರಮೇಶ್ ಮಚ್ಚಟ್ಟು, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಗೋಪಾಲಕೃಷ್ಣ ರಾಮನಗರ ಸೇನಾಪುರ, ಸಾಮಾನ್ಯ ವರ್ಗದಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ, ಡಾ.ಅತುಲ್ಕುಮಾರ ಶೆಟ್ಟಿ ಚಿತ್ತೂರು, ಜಯಾನಂದ ಹೋಬಳಿದಾರ ಬೈಂದೂರು ಹಾಗೂ ಶೇಖರ ಪೂಜಾರಿ ಕಾರ್ಕಡ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಹಿಂದಿನ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ನೂತನ ಸಮಿತಿಯ ರಚಿನೆಗಾಗಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿತ್ತು. ರಾಜ್ಯ ಹಾಗೂ ಹೊರ ರಾಜ್ಯದ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಪ್ರಭಾವಿಗಳು ಅರ್ಜಿ ಸಲ್ಲಿಸಿದ್ದರಲ್ಲದೆ. ನೇಮಕಾತಿಗಾಗಿ ವಿವಿಧ ರೀತಿಯ ಲಾಭಿಗಳನ್ನು ನಡೆಸಿದ್ದರು. ಕಳೆದ ಕೆಲವು ದಿನಗಳಿಂದ ನೂತನ ಸಮಿತಿಯ ರಚನೆಯ ಕುರಿತಂತೆ ಹಲವು ಹೆಸರುಗಳ ಅಂತೆ–ಕಂತೆಯ ಓಡಾಟ ನಡೆದಿತ್ತು. ಇಂದು ಪ್ರಕಟಣೆಯಾಗಿರುವ ಪಟ್ಟಿಯಲ್ಲಿ ಬೆರಳೆಣಿಕೆಯ ನಿರೀಕ್ಷಿತ ಹೆಸರನ್ನು ಹೊರತು ಪಡಿಸಿದರೆ, ಅಚ್ಚರಿಯ ಹೊಸ ಹೆಸರುಗಳು ಪ್ರಕಟವಾಗಿದೆ.
ನೂತನವಾಗಿ ಪ್ರಕಟವಾಗಿರುವ ಪಟ್ಟಿಯಲ್ಲಿ ಬಹುತೇಕ ಬೈಂದೂರು ಹಾಗೂ ಕುಂದಾಪುರ ಕ್ಷೇತ್ರ ವ್ಯಾಪ್ತಿಯವರಿಗೆ ಮಣೆ ಹಾಕಲಾಗಿದೆ. ಬಂಟ ಹಾಗೂ ಜಿಎಸ್ಬಿ ಸಮುದಾಯಕ್ಕೆ ತಲಾ 2, ರಾಮಕ್ಷತ್ರೀಯ, ಮೊಗವೀರ, ಬಿಲ್ಲವ, ಪರಿಶಿಷ್ಟ ಜಾತಿ ಹಾಗೂ ಬ್ರಾಹ್ಮಣ ಸಮುದಾಯದ ತಲಾ ಓರ್ವ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮಂಗಳವಾರ ಪ್ರಕಟವಾಗಿರುವ ಪಟ್ಟಿಯಲ್ಲಿ ಡಾ.ಅತುಲ್ಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ ಹಾಗೂ ಕೆ.ರಾಮಚಂದ್ರ ಅಡಿಗ ಈ ಹಿಂದೆ ಒಂದು ಅವಧಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.