ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ರಥೋತ್ಸವ

Spread the love

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ರಥೋತ್ಸವ

ಕುಂದಾಪುರ : ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಮಹಾ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಶ್ರೀ ದೇವಿಯ ವೈಭವದ ರಥೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.

ನವರಾತ್ರಿ ಪ್ರಾರಂಭವಾದ ದಿನದಿಂದ ನವರಾತ್ರಿಯವರೆಗೂ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಯನ್ನು ಮಾಡಲಾಗಿತ್ತು. ಶನಿವಾರ ರಾತ್ರಿ ದೇಗುಲದಿಂದ ಹೊರಕ್ಕೆ ತರಲಾದ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣಿ ಹಾಗೂ ಬಲಿ ಸೇವೆ ನಡೆದ ಬಳಿಕ ಶ್ರೀ ದೇವಿಯನ್ನು ಅಲಂಕರಿಸಿದ ಚಿನ್ನದ ರಥದಲ್ಲಿ ಕುಳ್ಳಿರಿಸಲಾಯಿತು.

ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗರು ರಥಾರೋಹಣಳಾದ ಶ್ರೀ ದೇವಿಗೆ ಪೂಜೆ ನೆರವೇರಿಸಿ, ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆಯ ನಡೆಸಲಾಯಿತು. ನಂತರ ಸೇರಿದ್ದ ಸಾವಿರಾರು ಜನರು ಶ್ರೀ ದೇವಿಯ ಜಯ ಘೋಷದೊಂದಿಗೆ ರಥವನ್ನು ಎಳೆದರು.

ದೇವಳದ ಒಳ ಪ್ರಾಂಗಣದಲ್ಲಿ ಮೂರು ಸುತ್ತು–ಬಂದು ಮತ್ತೆ ರಥ ಮೂಲ ಸ್ಥಾನವನ್ನು ತಲುಪಿದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆದುಕೊಳ್ಳಲು ಭಕ್ತರು ಹರಸಾಹಸ ಪಟ್ಟರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ದೇವಸ್ಥಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ ಮುಂತಾದವರಿದ್ದರು.

ಸಂಪ್ರದಾಯ ಬದಲಿಗೆ ಆಕ್ಷೇಪ
ಕಳೆದ ವರ್ಷಗಳಲ್ಲಿ ಮಹಾನವರಾತ್ರಿ ಉತ್ಸವದ ಅಂಗವಾಗಿ ನಡೆಯುವ ರಥೋತ್ಸವಕ್ಕಾಗಿ ಮರದಿಂದ ಮಾಡಿರುವ ’ಪುಷ್ಪ ರಥ’ ವನ್ನು ಬಳಕೆ ಮಾಡಲಾಗುತ್ತಿತ್ತು. ಈ ರಥವನ್ನು ಪುಷ್ಪದಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಇರಿಸಿ ದೇಗುಲದ ಆವರಣದ ಒಳಗೆ ಪ್ರದಕ್ಷಿಣಿ ಬರುವ ಮೂಲಕ ವೈಭವದ ರಥೋತ್ಸವ ನಡೆಯುತ್ತಿತ್ತು. ಈ ಬಾರಿ ಶ್ರೀ ದೇವರ ರಥೋತ್ಸವವನ್ನು ’ಚಿನ್ನದ ರಥ’ ದಲ್ಲಿ ಮಾಡಿರುವುದರಿಂದ ದೇಗುಲದ ಸಂಪ್ರದಾಯ ಹಾಗೂ ಶಿಷ್ಟಾಚಾರವನ್ನು ಬದಲಾಯಿಸಲಾಗಿದೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿದೆ.

ಸಂಪ್ರದಾಯ ಬದಲಾಗಿದೆ ಎನ್ನುವ ಆಕ್ಷೇಪಗಳ ಕುರಿತು ಸ್ವಷ್ಟನೆ ನೀಡಿರುವ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು, ದೇವಸ್ಥಾನದ ಪುಷ್ಪ ರಥ ಹಳೆಯದಾಗಿದ್ದರಿಂದ ಅದರ ಬದಲಿಗೆಂದು 16 ವರ್ಷದ ಚಿನ್ನದ ರಥವನ್ನು ನಿರ್ಮಿಸಲಾಗಿತ್ತು. ಎಲ್ಲಾ ಸಂಪ್ರದಾಯಕ್ಕಿಂತ ಚಿನ್ನ ಶ್ರೇಷ್ಠವಾಗಿದ್ದರಿಂದ, ದೇಶಕ್ಕೆ ತಗುಲಿರುವ ಕೊರೊನಾ ಮಹಾಮಾರಿ ಶೀಘ್ರ ನಿವಾರಣೆಯಾಗಲಿ ಎನ್ನುವ ಉದ್ದೇಶದಿಂದ ಈ ಬಾರಿ ಶ್ರೀದೇವಿಯನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಗಿದೆ. ಯಾವುದೆ ಸಂಪ್ರದಾಯವನ್ನು ಮುರಿಯಲಿಲ್ಲ ಎಂದಿದ್ದಾರೆ.

ಭಾನುವಾರ ವಿಜಯದಶಮಿ ಆಚರಣೆಯ ಅಂಗವಾಗಿ ಬೆಳಿಗ್ಗೆ 4 ಗಂಟೆಯಿಂದ ಪುಟಾಣೆ ಮಕ್ಕಳಿಗೆ ದೇವಸ್ಥಾನದ ಋತ್ವೀಜರ ಮೂಲಕ ಅಕ್ಷರಾಭ್ಯಾಸ ಕಾರ್ಯಕ್ರಮ, ಕದಿರು ಹಬ್ಬದ ಆಚರಣೆ ಹಾಗೂ ನವನ್ನಾಪ್ರಾಶನ ಹಾಗೂ ಸಂಜೆ ವಿಜಯೋತ್ಸವ ನಡೆಯಿತು.


Spread the love