
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನಟ ಯಶ್ ಭೇಟಿ, ಪೂಜೆ ಸಲ್ಲಿಕೆ
ಉಡುಪಿ: ಚಂದನವನದ ಬಹುನಿರೀಕ್ಷಿತ ಬಿಗ್ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ, ಯಶ್ ನಟನೆಯ ಕೆ.ಜಿ.ಎಫ್ ಎರಡನೇ ಭಾಗ ಏಪ್ರಿಲ್ 14ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಯಶ್ ಸಮ್ಮುಖದಲ್ಲಿ ಇಡೀ ಚಿತ್ರತಂಡವು ಕೊಲ್ಲೂರಿನ ಮೂಕಾಂಬಿಕೆ ಹಾಗೂ ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.
ದೇಗುಲಕ್ಕೆಭೇಟಿ ನೀಡದ ಯಶ್ ಅವರನ್ನು ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ, ತೀರ್ಥ, ಪ್ರಸಾದ ನೀಡಲಾಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ರಂನ ಉಪಾಧ್ಯಾಯ, ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿ ವಿಠ್ಠಲ ಉಪಾಧ್ಯಾಯ, ವ್ಯವಸ್ಥಾಪಕ ನಟೇಶ್ ಕಾರಂತ ಇದ್ದರು.
ಯಶ್ ಕ್ರಿಕೆಟ್ ಆಟ
ಕೆಜಿಎಫ್-೨ ಸಿನಿಮಾಕ್ಕೆ ಸಂಗೀತ ನೀಡುತ್ತಿರುವ ಪ್ರಸಿದ್ಧ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಬಸ್ರೂರಿನ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ಕೆಜಿಎಫ್-೨ ಸಿನಿಮಾಕ್ಕೆ ಸಂಬಂಧಿಸಿದಂತೆ ಒಂದಷ್ಟು ಕೆಲಸಗಳು ನಡೆಯುತ್ತಿದ್ದು, ಸಿನಿಮಾದ ಮುಕ್ತಾಯ ಹಂತಕ್ಕೆ ಗಮನಹರಿಸಿರುವ ನಾಯಕ ನಟ ಯಶ್ ಈ ಕಾರಣಕ್ಕಾಗಿ ಕುಂದಾಪುರ ಪರಿಸರದಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ಸಂಗೀತ ಕಾರ್ಯದ ನಡುವಿನಲ್ಲಿ ಬಿಡುವು ಮಾಡಿಕೊಂಡು ರವಿ ಬಸ್ರೂರು ಅವರ ಮನೆ ಸಮೀಪದ ಕ್ರೀಡಾ ಮೈದಾನದಲ್ಲಿ ಯಶ್ ಕ್ರಿಕೆಟ್ ಆಡುವುದರೊಂದಿಗೆ ಗಮನ ಸೆಳೆದಿದ್ದಾರೆ. ಬಸ್ರೂರಿನಲ್ಲಿ ಯಶ್ ಕ್ರಿಕೆಟ್ಆಡುತ್ತಿರುವ ಚುಟುಕು ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿರುವ ಕೆ.ಜಿ.ಎಫ್-2 ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಇತ್ತೀಚೆಗಷ್ಟೇ ಚಿತ್ರದಲ್ಲಿ ‘ಅಧೀರ’ನ ಪಾತ್ರಕ್ಕೆ ಬಣ್ಣಹಚ್ಚಿದ್ದ ಬಾಲಿವುಡ್ ನಟ ಸಂಜಯ್ ದತ್ ತಮ್ಮ ಡಬ್ಬಿಂಗ್ ಪೂರ್ಣಗೊಳಿಸಿದ್ದರು.
ಕಳೆದ ವರ್ಷದ ಜುಲೈನಲ್ಲೇ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್-2’ ಚಿತ್ರವು ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಇದಾದ ನಂತರ ಸರ್ಕಾರವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧಿಸಿದ್ದ ಕಾರಣ ಸಿನಿಮಾ ಬಿಡುಗಡೆಯನ್ನು 2022ರ ಏ.14ಕ್ಕೆ ಚಿತ್ರತಂಡವು ಮುಂದೂಡಿತ್ತು.
ಚಿತ್ರದಲ್ಲಿ ಬಹುಮುಖ್ಯವಾದ ‘ರಮಿಕಾ ಸೇನ್’ ಪಾತ್ರದಲ್ಲಿ ಬಾಲಿವುಡ್ನ ನಟಿ ರವಿನಾ ಟಂಡನ್ ನಟಿಸಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣಹಚ್ಚಿದ್ದು, ಪ್ರಕಾಶ್ ರೈ, ಮಾಳವಿಕಾ ಅವಿನಾಶ್, ಬಿ.ಸುರೇಶ್, ಯಶ್ ಶೆಟ್ಟಿ, ಅರ್ಚನಾ ಜೋಯಿಷ್, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ.