ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

Spread the love

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

ಕುಂದಾಪುರ: ಜಗತ್ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ.

ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಶ್ರೀ ದೇವಿಯ ದರ್ಶನಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಅನ್ನ ಸಂತರ್ಪಣೆ, ಪ್ರಸಾದ‌ ವಿತರಣೆ, ಸೇವೆ ಸೇರಿದಂತೆ ಉತ್ಸವದ ಯಶಸ್ಸಿಗೆ ದೇಗುಲದ ಆಡಳಿತ ವ್ಯವಸ್ಥೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

ಸೋಮವಾರದಿಂದ ಪ್ರಾರಂಭವಾಗಿರುವ ನವರಾತ್ರಿಯ ಉತ್ಸವದ ಆಚರಣೆಗಳು ಅ.5 ರ ವರೆಗೂ ನಡೆಯಲಿದೆ. ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜೊತೆ ನವರಾತ್ರಿ ಅಂಗವಾಗಿ ಸುಹಾಸಿನಿಯರ ಪೂಜೆ ಹಾಗೂ ಇತರ ವಿಶೆಷ ಪೂಜೆ ಹಾಗೂ ಉತ್ಸವಗಳು ನಡೆಯಲಿದೆ.

ಅ.4 ರಂದು ಮಹಾ ನವಮಿಯ ಪ್ರಯುಕ್ತ ಬೆಳಿಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1 ಕ್ಕೆ ರಥೋತ್ಸವ ಜರುಗಲಿದೆ. ಈ ಸಂದರ್ಭದಲ್ಲಿ ದೇವರ ರಥದಿಂದ ಚೆಲ್ಲುವ ನಾಣ್ಯ ಹಾಗೂ ಇತರ ವಸ್ತುಗಳನ್ನು ಪಡೆದುಕೊಳ್ಳಲು ಸಾವಿರಾರು ಸಂಖ್ಯೆಯ ಭಕ್ತರು ಭಕ್ತಿ ಪರಾಕಾಷ್ಠೆಯಲ್ಲಿ ಮೇಲಾಟ ನಡೆಸುತ್ತಾರೆ.

ಅ.5 ರಂದು ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ಗಂಟೆ 5.30 ಕ್ಕೆ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ.

ಉತ್ಸವ ಆಚರಣೆಯ ಅಂಗವಾಗಿ ದೇವಳದ ಸ್ವರ್ಣಮುಖಿ ಮಂಟಪದಲ್ಲಿ ಪ್ರತಿ ದಿನ ಅಪರಾಹ್ನ 2 ಗಂಟೆಯಿಂದ ರಾತ್ರಿ 11.30 ರ ವರೆಗೆ ದೇಶದ ವಿವಿಧ ಭಾಗದ ಕಲಾ ತಂಡಗಳಿಂದ ಸೇವಾ ರೂಪವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.

ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪ ಹಾಗೂ ಹೂವಿನಿಂದ ಅಲಂಕರಿಸಲಾಗಿದೆ.


Spread the love