ಕೊಳ್ಳೇಗಾಲದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Spread the love

ಕೊಳ್ಳೇಗಾಲದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಳ್ಳೇಗಾಲ ತಾಲೂಕು ಆಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಳ್ಳೇಗಾಲದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಚಾಮರಾಜನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬುಧವಾರ ವಿಜೃಂಭಣೆಯ ಚಾಲನೆ ದೊರೆಯಿತು.

ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ಆವರಣದ ಜನಪದ ಮಹಾ ಮಂಟಪದ ಶ್ರೀ ಕುಮಾರ್ ನಿಜಗುಣ ವೇದಿಕೆಯಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಮಹೇಶ್ ಜೋಶಿ ಅವರು ಚಾಮರಾಜನಗರ ಜಿಲ್ಲೆಯು ಕೇರಳ ಹಾಗೂ ತಮಿಳುನಾಡು ರಾಜ್ಯದ ಗಡಿ ಹೊಂದಿದ್ದರೂ ಸಹ ಇಲ್ಲಿ ಕನ್ನಡಕ್ಕೆ ಇರುವ ಅಗ್ರಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಕನ್ನಡತನ ಕಾಪಾಡಿಕೊಂಡು ಬಂದಿರುವ ಚಾಮರಾಜನಗರ ಜಿಲ್ಲೆಯ ಜನ ಒಳ್ಳೆಯವರು ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಎನ್. ಮಹೇಶ್ ಅವರು ಸಮ್ಮೇಳನದ ಸರ್ವಾಧ್ಯಕ್ಷರಾದ ಮಹಾದೇವ ಶಂಕನಪುರ ಅವರು ಕಲೆ, ಸಾಹಿತ್ಯ, ಸಂಸ್ಕೃತಿ, ಸಮಸ್ಯೆಗಳು ಹಾಗೂ ಜಿಲ್ಲೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ವಿಸ್ತೃತವಾಗಿ ಮಂಡಿಸಿದ್ದಾರೆ. ಸಮ್ಮೇಳನದ ಅಧ್ಯಕ್ಷರು ಪ್ರಸ್ತಾಪಿಸಿರುವ ವಿಚಾರಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವುದಾಗಿ ನುಡಿದರು.

ಗಡಿ ಭಾಗದ ಶಾಲೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ವಿವೇಕ ಯೋಜನೆಯಡಿ 7900 ಶಾಲಾ ಕೊಠಡಿಗಳನ್ನು 1200 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲು ಸಂಕಲ್ಪ ಮಾಡಲಾಗಿದ್ದು, ಫೆಬ್ರವರಿ ಮಾರ್ಚ್ ಒಳಗೆ ಶಾಲಾ ಕೊಠಡಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಜಿಲ್ಲೆಯಲ್ಲಿ 105ಶಾಲಾ ಕೊಠಡಿಗಳು ನಿರ್ಮಾಣವಾಗಲಿವೆ. ನನ್ನ ಕ್ಷೇತ್ರದಲ್ಲಿ ಶಾಸಕ ಅನುದಾನದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ 35 ಶಾಲಾ ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯವನ್ನು ಸಮರ್ಪಕವಾಗಿ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.

ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತಿದೆ. ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ, ಮಹಾದೇವ ಶಂಕನಪುರ, ಜೀರಿಗೆಗದ್ದೆ ಮಾದಮ್ಮ ಅವರ ಪ್ರತಿಭೆ ಸಾಮರ್ಥ್ಯ ಗುರುತಿಸಿ ಗೌರವಿಸಲಾಗಿದೆ. ಜಾನಪದ ನೆಲೆಯಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜಾನಪದ ಪ್ರತಿಭೆಗಳನ್ನ ಗುರುತಿಸುವ ಕಾರ್ಯವು ನಡೆಯಲಿದೆ. ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಮಹಾದೇವ ಶಂಕನಪುರ ಅವರು ಮಾತನಾಡಿ ಪ್ರಸ್ತುತ ಆಧುನಿಕ ಕನ್ನಡ ಸಾಹಿತ್ಯ ಮತ್ತು ದಲಿತ ಬಂಡಾಯ ಸಾಹಿತ್ಯಕ್ಕೆ ನಮ್ಮ ಜಿಲ್ಲೆಯ ಸಾಹಿತಿಗಳ ಕೊಡುಗೆಯೂ ಕೂಡ ಗಮನಾರ್ಹವಾಗಿದೆ. ನೂರಾರು ಬರಹಗಾರರು ನಮ್ಮ ಜಿಲ್ಲೆಯ ಸಾಹಿತ್ಯ ಚರಿತ್ರೆಯನ್ನು ಶ್ರೀಮಂತಗೊಳಿಸಿದ್ದಾರೆ. ಜಿಲ್ಲೆಯ ಸಾಹಿತಿಗಳ ಬರಹಗಳು ಕನ್ನಡ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದ ಉದಾಹರಣೆಗಳಿವೆ ಎಂದರು.

ಮಳವಳ್ಳಿ ಶ್ರೀ ಮಂಟೇಸ್ವಾಮಿ ಮಠದ ಶ್ರೀಕಂಠಸಿದ್ದಲಿಂಗರಾಜೇಅರಸ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಮಂಜು ಕೋಡಿಉಗನೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಶೈಲಕುಮಾರ್, ಕಾವೇರಿ ಜಲಾನಯನ ಅಭಿವೃದ್ದಿ ಯೋಜನೆಯ ಅಧ್ಯಕ್ಷರಾದ ಜಿ. ನಿಜಗುಣರಾಜು, ಸಾಹಿತಿ ಮಂಗಳ ಮುದ್ದು ಮಾದಪ್ಪ, ಮಾಜಿ ಶಾಸಕರಾದ ಎಸ್. ಬಾಲರಾಜು ಅವರು ಮಾತನಾಡಿದರು.

ಶ್ರೀ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಹೊರೆಯಾಲ ದೊರೆಸ್ವಾಮಿ ಅವರಿಗೆ ಮುದ್ದುಮಾದಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಮಹಾದ್ವಾರ, ಪುಸ್ತಕ ಮಳಿಗೆ ಉದ್ಘಾಟನೆಯನ್ನು ಕಾವೇರಿ ಜಲಾನಯನ ಅಭಿವೃದ್ದಿ ಯೋಜನೆಯ ಅಧ್ಯಕ್ಷರಾದ ಜಿ. ನಿಜಗುಣರಾಜು ಅವರು ನೆರವೇರಿಸಿದರು.


Spread the love