ಕೊಳ್ಳೇಗಾಲ ಕಾರ್ಮಿಕರ ಕಲ್ಯಾಣ ಮಂಡಳಿ ನಿರೀಕ್ಷಕರಿಗೆ ನೋಟೀಸ್

Spread the love

ಕೊಳ್ಳೇಗಾಲ ಕಾರ್ಮಿಕರ ಕಲ್ಯಾಣ ಮಂಡಳಿ ನಿರೀಕ್ಷಕರಿಗೆ ನೋಟೀಸ್

ಚಾಮರಾಜನಗರ: ಪಡಿತರ ಕಿಟ್ ವಿತರಣೆ ಮಾಡುವ ವೇಳೆ ಕೋವಿಡ್ -19 ಶಿಷ್ಟಾಚಾರ ಉಲ್ಲಂಘನೆ ಮಾಡಿದ ಆರೋಪದಡಿ ಕಾರ್ಮಿಕ ಇಲಾಖೆಯ ಕೊಳ್ಳೇಗಾಲ ತಾಲ್ಲೂಕು ಕಾರ್ಮಿಕ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕು ಕಾರ್ಮಿಕ ನಿರೀಕ್ಷರಾದ ಪಿ.ಚಂದ್ರ ಎಂಬುವರಿಗೆ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಕಳೆದ ಜುಲೈ 9 ರಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸರಬರಾಜಾಗಿದ್ದ ಪಡಿತರ ಕಿಟ್ ನ್ನು ಕೊಳ್ಳೇಗಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಿಸುವ ವೇಳೆ ಯಾವುದೇ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸದೇ ಕೋವಿಡ್ -19 ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿತ್ತು. ಇದನ್ನು ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿತ್ತು.

ಹೀಗಾಗಿಯೇ ಲೋಪಕ್ಕೆ ನಿಮ್ಮ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆ 1897 ರ ಪ್ರಕಾರ ಏಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ನೋಟಿಸ್ ತಲುಪಿದ ಮೂರು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನೀಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಜತೆಗೆ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸಲು ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿದ್ದು ಕೋವಿಡ್ ಶಿಷ್ಠಾಚಾರ ಉಲ್ಲಂಘನೆ ಕಂಡುಬಂದಿದ್ದು ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆಯೂ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಪ್ರತ್ಯೇಕವಾಗಿ ಸೂಚನೆ ನೀಡಿದ್ದಾರೆ. ಜತೆಗೆ ಜಿಲ್ಲೆಯ ಇತರೆ ತಾಲ್ಲೂಕಿನಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಿ ಪಡಿತರ ಕಿಟ್ ಗಳನ್ನು ವಿತರಿಸಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿಯವರಿಗೆ ಎಚ್ಚರಿಕೆ ನೀಡಿದ್ದಾರೆ.


Spread the love