ಕೋಟತಟ್ಟು ಮೆಹಂದಿ‌ ಪ್ರಕರಣ: ಕೊರಗ‌ ಸಮುದಾಯದವರೂ ಸೇರಿದಂತೆ ಏಳು ಮಂದಿಯ ವಿರುದ್ದ ದೂರು ನೀಡಿದ ಪೊಲೀಸ್ ಸಿಬ್ಬಂದಿ

Spread the love

ಕೋಟತಟ್ಟು ಮೆಹಂದಿ‌ ಪ್ರಕರಣ: ಕೊರಗ‌ ಸಮುದಾಯದವರೂ ಸೇರಿದಂತೆ ಏಳು ಮಂದಿಯ ವಿರುದ್ದ ದೂರು ನೀಡಿದ ಪೊಲೀಸ್ ಸಿಬ್ಬಂದಿ

ಕುಂದಾಪುರ: ಮೆಹಂದಿ ಪ್ರಕರಣದಲ್ಲಿ ಪೊಲೀಸರ ದೌರ್ಜನ್ಯದಿಂದ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ ಬೆನ್ನಲ್ಲೇ ಕೊರಗ ಸಮುದಾಯದವರೂ ಸೇರಿದಂತೆ‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆನ್ನಲಾದ ಏಳು ಮಂದಿಯ ಮೇಲೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ ಠಾಣೆಯ ಪೊಲೀಸ್‌ ಕಾನ್ಸ್ಟ್‌ ಟೇಬಲ್‌ ಜಯರಾಮ ನಾಯ್ಕ ಎಲ್‌ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕೊರಗ ಸಮುದಾಯದ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್ ಹಾಗೂ ಸ್ಥಳೀಯರಾದ ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಜಯರಾಮ ನಾಯ್ಕ ಎಲ್‌ ಎಂಬವರು ಕೋಟ ಠಾಣೆಯಲ್ಲಿ ಕಾನ್ಸ್‌ ಟೇಬಲ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು ಡಿ. 27 ರಂದು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಕರ್ತವ್ಯ ಮುಗಿಸಿ ವಸತಿ ಗೃಹದಲ್ಲಿ ವಿಶ್ರಾಂತಿಯಲ್ಲಿರುವಾಗ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ರಾತ್ರಿ 10:45 ಗಂಟೆಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಏರುಧ್ವನಿಯಲ್ಲಿ ಡಿಜೆ ಸೌಂಡ್ ಅನ್ನು ಹಾಕಿ ಮೆಹಂದಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ ನೃತ್ಯ ಮಾಡುತ್ತಿದ್ದು ಈ ಬಗ್ಗೆ ಜಯರಾಮ ನಾಯ್ಕ ಎಲ್‌ ಅವರು ಠಾಣಾಧಿಕಾರಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಏಳು ಮಂದಿ ಹಾಗೂ ಇತರರು ಡಿಜೆ ಸೌಂಡ್ ನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.

ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ರವರು ಪಿ.ಎಸ್ಐರವರ ಬಳಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ ಅನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹಆರೋಪಿಗಳು ಉಡಾಫೆಯಾಗಿ ಮಾತನಾಡಿದ್ದಾರೆ. ಆಗ ಪಿ.ಎಸ್.ಐ ಅವರು ಡಿಜೆ ಸೌಂಡ್ ಅನ್ನು ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿಗಳು ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿ.ಎಸ್.ಐ ಅವರ ಬಳಿ ನೀವು ಏನು ಮಾಡಿತ್ತೀರಾ ನಾವು ಬಂದ್ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿ ಸಮವಸ್ತ್ರದಲ್ಲಿದ್ದ ಪಿ.ಎಸ್.ಐ ಅವರನ್ನು ಕೈಯಿಂದ ದೂಡಿದ್ದಾರೆ. ಆಗ ಜಯರಾಮ ಅವರು ಡಿಜೆಯನ್ನು ಬಂದ್ ಮಾಡಲು ಹೋದಾಗ ಆರೋಪಿತರು ಅವರನ್ನು ಸುತ್ತುವರಿದು ದೊಣ್ಣೆಯಿಂದ ಹೊಡೆದು ಜಯರಾಮ್ ಅವರು ಧರಿಸಿದ ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಯರಾಮ್ ನೀಡಿರುವ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 215 /2021 ಕಲಂ: 143, 147, 148, 323, 324, 353, 504, 506 ಜೊತೆಗೆ 149 ಐಪಿಸಿ ಮತ್ತು 3(1)(r),3(1)(s) 3 (2) (va) SC ST ACT 1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ರಾಜೇಶ್‌ ರಿಂದಲೂ ದೂರು ದಾಖಲು

ಈ ನಡುವೆ ರಾಜೇಶ್ ಅವರು ಕೋಟ ಠಾಣೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ನೆರೆದ ಜನರ ಮೇಲೆ ಕೋಟ ಪೊಲೀಸರು ವಿನಾಕಾರಣ ಲಾಠಿಪ್ರಹಾರ ನಡೆಸಿದ್ದಾಗಿ ಠಾಣೆಯ ಪಿಎಸ್‌ಐ ಸಂತೋಷ್ ಸೇರಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜೇಶ್ ದೂರಿನ ಸಾರಾಂಶ: ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ಗಣಪ ಎಂಬವರ ಮನೆಯಲ್ಲಿ ಡಿ.27ರ ರಾತ್ರಿ ಮೆಹಂದಿ ಶಾಸ್ತ್ರವಿದ್ದು, ಡಿಜೆಯನ್ನು ವ್ಯವಸ್ಥೆ ಮಾಡಲಾಗಿತ್ತು. ನೆಂಟರಿಸ್ಟರೆಲ್ಲ ಸೇರಿ 8:00ಕ್ಕೆ ಪ್ರಾರಂಭಿಸಿ 10 ಗಂಟೆಗೆ ಮುಗಿಸಲು ಅಣಿಯಾಗುತಿದ್ದಾಗ ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ ಪಿ, ಹೆಡ್ ಕಾನ್‌ಸ್ಟೇಬಲ್ ರಾಮಣ್ಣ, ಅಶೋಕ್ ಶೆಟ್ಟಿ, ಮಂಜುನಾಥ ಮತ್ತು ಇತರ ಸಿಬ್ಬಂದಿಗಳು ಮೆಹೆಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ, ಬೈದು, ಲಾಠಿಯಿಂದ ತನ್ನ ಚಿಕ್ಕಪ್ಪ ಗಣೇಶ ಬಾರ್ಕೂರು ಎಂಬವರಿಗೆ ಹೊಡೆದು, ಹಲ್ಲೆ ನಡೆಸಿ ಜೀಪಿಗೆ ತುಂಬುತ್ತಿದ್ದಂತೆ ತಾನು, ತಾಯಿ ಗಿರಿಜ ಹಾಗೂ ಇತರೆ ಹಿರಿಯ ಮಹಿಳೆಯರು ಮನವಿ ಮಾಡಿಕೊಂಡರೂ ಸ್ಪಂದಿಸದೇ, ಲಕ್ಷ್ಮೀ ಎಂಬವರಿಗೆ ಲಾಠಿಯಿಂದ ತಲೆಗೆ ಹೊಡೆದು ಬೂಟು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವರನ್ನು ಜೀಪಿಗೆ ತುಂಬಿ ಠಾಣೆಗೆ ಕರೆದುಕೊಂಡು ಹೋಗಿದ್ದಲ್ಲದೇ, ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ ಸೆಲ್ ಒಳಗೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಮದುಮಗ ರಾಜೇಶ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಎರಡೂ ದೂರುಗಳ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love