ಕೋಟೆಶ್ವರದಲ್ಲಿ ರೂ. 3.76 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ

Spread the love

ಕೋಟೆಶ್ವರದಲ್ಲಿ 3.76 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶಕ್ಕೆ

ಕುಂದಾಪುರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮು ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ಕಿ ವಶಕ್ಕೆ ಪಡೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿ ವೇಳೆ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಆರೋಪಿಗಳನ್ನು ಕೋಟೆಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ, ಮಂಗಳೂರು ನಿವಾಸಿ ಆಜಾಮ್, ಉಡುಪಿ ನಿವಾಸಿ ರಮಾ ಪೂಜಾರಿ ಎಂದು ತಿಳಿದು ಬಂದಿದ್ದು, ಆರೋಪಿಗಳಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

ಕೋಟೆಶ್ವರ ಗ್ರಾಮದ ಹಾಲಾಡಿ ರಸ್ತೆಯಲ್ಲಿರುವ ನಂದಿ ಹೋಟೆಲ್ ನ ಹಿಂಭಾಗದ ಉದಯ್ ಕುಮಾರ್ ಶೆಟ್ಟಿಯವರ ಶೆಡ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಸಿಬ್ಬಂದಿಗಳು  ದಾಳಿ ಮಾಡಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ವಿವಿಧ ಸಾಮಾಜಿಕ ಯೋಜನೆಗೆ ವಿತರಣೆಯಾದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಂಗ್ರಹಣೆ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 3,76,800 ರೂ. ಮೌಲ್ಯದ 25,120 ಕೆಜಿ ಪಡಿತರ ಅಕ್ಕಿ, 2 ಲಕ್ಷ ರೂ ಮೌಲ್ಯದ ಅಶೋಕ್ ಲೈಲ್ಯಾಡ್ ಗೂಡ್ಸ್ ವಾಹನ, 4 ಲಕ್ಷ ರೂ ಮೌಲ್ಯದ ಟಾಟಾ ವಾಹನ  , 2,000 ರೂ. ಮೌಲ್ಯದ ಹೊಲಿಗೆ ಯಂತ್ರ ಹಾಗೂ 3,000 ರೂ. ಮೌಲ್ಯದ ತೂಕ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.


Spread the love