ಕೋಟೇಶ್ವರದ ಕೊಡಿ ಹಬ್ಬ : ವೈಭವದ ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು  

Spread the love

ಕೋಟೇಶ್ವರದ ಕೊಡಿ ಹಬ್ಬ : ವೈಭವದ ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು  

ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಕೊಡಿ ಹಬ್ಬ ಸಂಭ್ರಮದಿಂದ ಜರುಗಿತು‌. ಗುರುವಾರ ನಡೆದ ವೈಭವದ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾದರು‌.

ಗುರುವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಗೆ ತೊಡಗಿದ ಭಕ್ತರು, ಬೆಳಿಗ್ಗೆ 12.05 ರ ಮಕರ ಲಗ್ನದ ಸುಮುಹೂರ್ತದಲ್ಲಿ ನಡೆದ ಮನ್ಮಹಾರಥೋತ್ಸವದ ಆರೋಹಣವನ್ನು ಕಣ್ತುಂಬಿಕೊಂಡರು.

ನಸುಕಿನ ಜಾವದಿಂದಲೇ ಪ್ರಸಿದ್ದ ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಸಂಪ್ರದಾಯಬದ್ದ ಪೂಜೆ ಸಲ್ಲಿಸಿದರು. ಬೆಳಿಗ್ಗೆ ದೇವಸ್ಥಾನದಿಂದ ಋತ್ವೀಜರು, ಪಂಚ ವಾದ್ಯಗಳು, ಪಾರಂಪರಿಕ ಸೂರ್ಯ ವಾದ್ಯ, ತಟ್ಟಿರಾಯ, ಚಂಡೆ ಹಾಗೂ ವಾದ್ಯ ಮೇಳಗಳೊಂದಿಗೆ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ ಹಾಗೂ ಪರಿವಾರ ದೇವತೆಗಳನ್ನು ರಥದಲ್ಲಿ ಕುಳ್ಳಿರಿಸಿದ ಬಳಿಕ ಮಂಗಳಾರತಿ, ಹಣಕಾಯಿ ಹಾಗೂ ರಥದ ಚಕ್ರಗಳಿಗೆ ಕಾಯಿ ಒಡೆಯುವ ಪಾರಂಪರಿಕ ಪದ್ಧತಿ ಮುಗಿಸಿದ ಬಳಿಕ ರಥ ಬೀದಿಯಲ್ಲಿ ರಥವನ್ನು ಜಯ ಘೋಷದೊಂದಿಗೆ ಎಳೆಯುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು.

ಕೋಟಿಲಿಂಗೇಶ್ವರನೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಕೋಟಿಲಿಂಗೇಶ್ವರ ಭತ್ತದ ಕುಡಿಗಳನ್ನು ಜಯ ಘೋಷದೊಂದಿಗೆ ಸ್ವಾಗತಿಸಲಾಯಿತು. ನಂದಳಿಕೆಯ ಪಿ.ರವಿರಾಜ್ ಭಟ್ ಅವರು ಚಂಡೆ ವಾದನಕ್ಕೆ ದೇವರನ್ನು ತಲೆಯ ಮೇಲೆ ಕುಳ್ಳಿರಿಸಿಕೊಂಡು ತಾಂಡವ ನೃತ್ಯ ಸೇವೆ ಸಲ್ಲಿಸಿದರು. ಕೊಡಿ ಹಬ್ಬಕ್ಕೆ ಬಂದ ನವ ವಿವಾಹಿತರು ಬದುಕಿನ ಕುಡಿಯೊಡಿಯುತ್ತದೆ ಎನ್ನುವ ನಂಬಿಕೆಯಿಂದ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ‘ಕಬ್ಬಿನ ಕೊಡಿ’ ಯನ್ನು ಮನೆಗೆ ಕೊಂಡೊಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಆಕರ್ಷಕ ದೀಪಾಲಂಕಾರ:
ಕೋಟೇಶ್ವರದ ರಥ ಬೀದಿ, ಊರಿನ ಪ್ರಮುಖ ಬೀದಿಗಳು, ಕೋಟೇಶ್ವರದಿಂದ ಕುಂಭಾಸಿಯವರೆಗೆ ಹಾಗೂ ಕೋಟೇಶ್ವರದಿಂದ ಹಂಗಳೂರು ವಿನಾಯಕವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಕೋಟೇಶ್ವರದಲ್ಲಿ ವಿವಿಧ ಸಂಘಟನೆಗಳಿಂದ ಜಾತ್ರಾ ಉತ್ಸವವಕ್ಕಾಗಿ ಆಕರ್ಷಕ ದೃಶ್ಯ ಸಂಯೋಜನೆ, ಹಣತೆ ದೀಪಾಲಂಕಾರ ಹಾಗೂ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು. ದೇವಸ್ಥಾನ ಹಾಗೂ ಬ್ರಹ್ಮ ರಥಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ವಿವಿಧ ಸಂಘ-ಸಂಸ್ಥೆಗಳಿಂದ ಉಚಿತ ಪಾನಕ ಹಾಗೂ ಮಜ್ಜಿಗೆ ವಿತರಣೆ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಸುರೇಶ್ ಶೇರೆಗಾರ್ ಬೀಜಾಡಿ, ಚಂದ್ರಿಕಾ ಧನ್ಯ ಕೋಟೇಶ್ವರ, ಶಾರದಾ ಮೂಡುಗೋಪಾಡಿ, ಮಂಜುನಾಥ ಆಚಾರ್ಯ, ಭಾರತಿ, ತಂತ್ರಿ ಪ್ರಸನ್ನ ಕುಮಾರ್ ಐತಾಳ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಉದ್ಯಮಿ ಮಾರ್ಕೋಡು ಸುಧೀರ್‌ಕುಮಾರ ಶೆಟ್ಟಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇದ್ದರು.
ಕುಡಿ ಚಿಗುರುವ ಕೊಡಿ ಹಬ್ಬ:
ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ. ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ. ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ. ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬರಲು ಕಾರಣವಾದೆ. ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರು ಸುತ್ತು ಸುತ್ತುತ್ತದೆ. ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗಳ್ಳುತ್ತದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.


Spread the love