
ಕೋಟ್ಯಾಧಿಪತಿಯಾಗಿ ಮುಂದುವರೆದ ಮಲೆಮಹದೇಶ್ವರ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 42 ದಿನಗಳ ಅಂತರದಲ್ಲಿ ಎರಡೂವರೆ ಕೋಟಿ ರೂಪಾಯಿಗಳ ಕಾಣಿಕೆ ಸಂಗ್ರಹವಾಗಿದ್ದು, ಕಳೆದ ಹಲವು ಸಮಯಗಳಿಂದ ಮಹದೇಶ್ವರ ಕೋಟ್ಯಾಧಿಪತಿಯಾಗಿಯೇ ಮುಂದುವರೆಯುತ್ತಿರುವುದು ಕಂಡು ಬಂದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿನ ಕಾಣಿಕೆ ಎಣಿಕೆ ಕಾರ್ಯ ಪೊಲೀಸ್ ಬಂದೂ ಬಸ್ತ್ ನಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಸಮ್ಮುಖದಲ್ಲಿ ನಡೆದಿದ್ದು ಈ ವೇಳೆ ಹುಂಡಿಯಲ್ಲಿ ರೂ.2,52,55,599 ಹಾಗೂ 72 ಗ್ರಾಂ ಚಿನ್ನ, 3 ಕೆಜಿ 100 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ.
ರಾಜ್ಯದಲ್ಲೇ ಅತ್ಯಾಧಿಕ ಆದಾಯ ಹೊಂದಿದ ದೇವಾಲಯಗಳ ಪೈಕಿಯಲ್ಲಿ ಎರಡನೇ ಸ್ಥಾನವನ್ನು ಮಲೆ ಮಹದೇಶ್ವರ ದೇವಸ್ಥಾನ ಕಾಯ್ದುಕೊಂಡು ಬರುತ್ತಿರುವುದು ವಿಶೇಷವಾಗಿದೆ. ಪ್ರತಿದಿನವೂ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಆಗಮಿಸುತ್ತಿರುತ್ತಾರೆಯಾದರೂ ಅಮವಾಸ್ಯೆ ಮತ್ತು ಹುಣ್ಣಿಮೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಭಕ್ತಸಾಗರವೇ ಹರಿದು ಬರುತ್ತದೆ.
ಭಕ್ತರು ತಾವು ಮಾಡಿಕೊಂಡ ಹರಕೆಯನ್ನು ಕಾಣಿಕೆಯಾಗಿ, ವಿವಿಧ ಸೇವೆಗಳ ಮೂಲಕವೂ ಅರ್ಪಿಸುತ್ತಾರೆ. ಹಳೇ ಮೈಸೂರು ಮತ್ತು ತಮಿಳು ನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವುದು ವಿಶೇಷವಾಗಿದೆ.