ಕೋಡಿಬೆಂಗ್ರೆಯನ್ನು ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ಶಾಸಕ ಯಶ್ಪಾಲ್ ಮನವಿ
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೋಡಿ ಬೆಂಗ್ರೆ ಭಾಗವನ್ನು ಸ್ಥಳೀಯ ಜನತೆಯ ಬೇಡಿಕೆಯಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಕೆಮ್ಮಣ್ಣು ಗ್ರಾಮ ಪಂಚಾಯತ್ ಗೆ ಸೇರಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸ್ವರ್ಣ ನದಿ ಮತ್ತು ಸೀತಾನದಿ ಸಂಗಮ ಸ್ಥಳ, ಅಳಿವೆ ಬಾಗಿಲಿನಲ್ಲಿರುವ ಕೋಡಿಬೆಂಗ್ರೆಯು ಕುಂದಾಪುರ ವಿಧಾನಸಭಾ ಕ್ಷೇತ್ರದ, ಕೋಡಿ ಗ್ರಾಮ ಪಂಚಾಯತ್‌ಗೆ ಸೇರಿದ್ದು. ಮೂರು ಕಡೆಗಳಿಂದ ಜಲ ಪ್ರದೇಶದಿಂದ ಕೂಡಿದ್ದು, ಒಂದು ಕಡೆಯಿಂದ ಮಾತ್ರ ರಸ್ತೆ ಸಂಪರ್ಕ ಇರುತ್ತದೆ. ಪ್ರಸ್ತುತ ಕೋಡಿಬೇಂಗ್ರೆಯಿಂದ ಕೋಡಿ ಗ್ರಾಮ ಪಂಚಾಯತ್‌ಗೆ ಸರಕಾರಿ ದಾಖಲೆ ಪತ್ರಗಳ ಕೆಲಸಕ್ಕಾಗಿ ಸುಮಾರು 30 ಕಿ.ಮೀ. ನಷ್ಟು ಸುತ್ತು ಬಳಸಿ ಸಂಚರಿಸಬೇಕಾಗಿರುತ್ತದೆ. ಜನರಿಗೆ ಪ್ರಾಥಮಿಕ ಹಂತದ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾದ ಗ್ರಾಮ ಪಂಚಾಯತ್ ಕಛೇರಿ ಗ್ರಾಮದಿಂದ ಬಹುದೂರದಲ್ಲಿರುವುದರಿಂದ ಉಡುಪಿ ತಾಲೂಕಿನ ಕೋಡಿಬೆಂಗ್ರೆ ಪ್ರದೇಶದ 275 ಕ್ಕೂ ಅಧಿಕ ಕುಟುಂಬಗಳು ಬವಣೆ ಪಡುತ್ತಿದ್ದಾರೆ.
ಮೀನುಗಾರಿಕೆ ಕೋಡಿಬೇಂಗ್ರೆಯಲ್ಲಿನ ಮುಖ್ಯ ಕಸುಬಾಗಿದ್ದು, ಒಟ್ಟು 275 ಕ್ಕೂ ಹೆಚ್ಚಿನ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಮೀನುಗಾರಿಕಾ ಉದ್ಯಮ ನಡೆಸುತ್ತಿದ್ದಾರೆ. ಸದ್ರಿ ಪ್ರದೇಶದಲ್ಲಿ ಎಲ್ಲಾ ವರ್ಗದ ಮತ್ತು ಸಮುದಾಯದ ಜನರಿದ್ದು, 1200 ಮತದಾರರಿದ್ದಾರೆ ಮತ್ತು 2000 ಕ್ಕೂ ಅಧಿಕ ಜನಸಂಖ್ಯೆ ಇದೆ. ಕೋಡಿಬೆಂಗ್ರೆಯಿಂದ ಪಕ್ಕದ ಪಡುತೋನ್ಸೆ ಗ್ರಾಮ ಪಂಚಾಯತ್‌ಗೆ ಕೇವಲ 4 ಕಿ.ಮೀ. ಅಂತರವಿದೆ.
ಕೋಡಿಬೆಂಗ್ರೆ ಪ್ರದೇಶವು ಸ್ಥಳೀಯ ಪಡುತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರದೆ, 30 ಕಿ.ಮೀ. ದೂರವಿರುವ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರುವುದು ಜನಸಾಮಾನ್ಯರಿಗೆ ಬಹು ದೊಡ್ಡ ಸಮಸ್ಯೆಯಾಗಿದೆ.
ಕೋಡಿಬೇಂಗ್ರೆ ವಾರ್ಡನ್ನು ಕುಂದಾಪುರ ವಿಧಾನಸಭಾ ಕ್ಷೇತ್ರ ಕೋಡಿ ಗ್ರಾಮ ಪಂಚಾಯತ್‌ನಿಂದ ಬೇರ್ಪಡಿಸಿ, ಉಡುಪಿ ವಿಧಾನಸಭಾ ಕ್ಷೇತ್ರದ 31ನೇ ಪಡುತೋನ್ಸೆ-ಕೆಮ್ಮಣ್ಣು ಗ್ರಾಮ ಪಂಚಾಯತ್‌ಗೆ ಸೇರಿಸಬೇಕೆಂಬ ಬೇಡಿಕೆಯು ಹಲವಾರು ದಶಕಗಳ ಹಳೆಯದಾಗಿದ್ದು, ಸ್ಥಳೀಯ ಗ್ರಾಮಸ್ಥರಿಗೆ ಅನುಕೂಲವಾಗವಂತೆ ಕೋಡಿಬೆಂಗ್ರೆ ಪ್ರದೇಶವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಗ್ರಾಮ ಪಂಚಾಯತ್‌ನಿಂದ ಬೇರ್ಪಡಿಸಿ, ಉಡುಪಿ ವಿಧಾನಸಭಾ ಕ್ಷೇತ್ರದ 31ನೇ ಪಡುತೋನ್ಸೆ-ಕೆಮ್ಮಣ್ಣು ಗ್ರಾಮ ಪಂಚಾಯತ್‌ಗೆ ಸೇರಿಸುವ ಬಗ್ಗೆ ಸರಕಾರವು ತುರ್ತಾಗಿ ಕ್ರಮವಹಿಸುವಂತೆ ಸಚಿವರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
