ಕೋಮುಗಲಭೆಗೆ ಪ್ರಯತ್ನಿಸುವವರ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಲಿ – ಮಿಥುನ್‌ ರೈ

Spread the love

ಕೋಮುಗಲಭೆಗೆ ಪ್ರಯತ್ನಿಸುವವರ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಲಿ – ಮಿಥುನ್‌ ರೈ

ಮಂಗಳೂರು: ಜಿಲ್ಲೆಯನ್ನು ಕೋಮು ಗಲಭೆಗೆ ಪ್ರಯೋಗಶಾಲೆಯಾಗಿ ಉಪಯೋಗಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಪುಂಡ ಪೋಕರಿಗಳ ಕೆಲಸಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಮಿಥುನ್ ರೈ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸೌಹಾರ್ದದ ಕ್ಷೇತ್ರವಾಗಿರುವ ಬಪ್ಪನಾಡು ಜಾತ್ರೋತ್ಸವದ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ಹೇಳಿ ಬ್ಯಾನರ್ ಹಾಕಿರುವುದರ ಹಿಂದೆ ಜಿಲ್ಲಾಡಳಿತದ ಕುಮ್ಮಕ್ಕು ಇರುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.

ತಾವು ಆ ಬ್ಯಾನರ್ ಹಾಕಿಲ್ಲ, ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಕ್ಷೇತ್ರದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದ್ದರೂ ಬ್ಯಾನರ್ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕೂಡಾ ವೌನ ವಹಿಸಿದ್ದಾರೆ ಎಂದು ದೂರಿದರು.

ಯಾವುದೇ ಧಾರ್ಮಿಕ ಕ್ಷೇತ್ರಗಳ ಆಡಳಿತ ಸಮಿತಿಯು ಕೈಗೊಳ್ಳುವ ನಿರ್ಧಾರದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಅದನ್ನು ಬಿಟ್ಟು ಕಿಡಿಗೇಡಿಗಳು, ಸೌಹಾರ್ದ ಕೆಡಿಸಲು ಯಾವುದೇ ಧರ್ಮ, ಜಾತಿಯವರು, ಸಂಘಟನೆಗಳವರು ಇಂತಹ ಕಾರ್ಯ ಮಾಡಿದರೂ ಖಂಡಿಸುವುದಾಗಿ ಹೇಳಿದರು.

ಸೌಹಾರ್ದದ ಕ್ಷೇತ್ರ: ಬಪ್ಪನಾಡು ಬಪ್ಪ ಬ್ಯಾರಿಗಳಿಗೆ ಒಲಿದ ಕ್ಷೇತ್ರ. ಅಲ್ಲಿ ನಡೆದ ರಥೋತ್ಸವಕ್ಕೆ ಲಕ್ಷಾಂತರ ಚೆಂಡು ಮಲ್ಲಿಗೆಯನ್ನು ಹಾಕಲಾಗಿದೆ. ಶಂಕರಪುರದಲ್ಲಿ ಮಲ್ಲಿಗೆ ಬೆಳೆಯುವವರು ಹೆಚ್ಚಿನವರು ಕ್ರೈಸ್ತ ಸಮುದಾಯದವರು. ಅದನ್ನು ಖರೀದಿಸಿ ಮಾರುಕಟ್ಟೆ ಮಾಡುವವರು ಬಹುತೇಕರು ಮುಸ್ಲಿಂ ಸಮುದಾಯದವರು. ಅದನ್ನು ಖರೀದಿಸಿ ದೇವರಿಗೆ ಅರ್ಪಣೆ ಮಾಡುವವರು ಬಹುತೇಕರು ಹಿಂದೂ ಬಾಂಧವರು. ಬಪ್ಪನಾಡು ಕ್ಷೇತ್ರ ಈ ಮೂಲಕವೂ ಸೌಹಾರ್ದಕ್ಕೆ ನೈಜ ಉದಾಹರಣೆಯಾಗಿದೆ ಎಂದು ಮಿಥುನ್ ರೈ ಹೇಳಿದರು.

ಆದರೆ ಇಂತಹ ಕ್ಷೇತ್ರದಲ್ಲೂ ಜಾತಿ, ಧರ್ಮದ ಬಣ್ಣ ತಂದು, ಬಡವ್ಯಾಪಾರಿಗಳ ಜೀವನಕ್ಕೆ ಕಲ್ಲು ಹಾಕುವವರನ್ನು ಕ್ಷೇತ್ರದ ತಾಯಿ ಕೂಡ ಮೆಚ್ಚುವುದಿಲ್ಲ. ಇದು ಎಲ್ಲರ ಮನಸ್ಸಿಗೆ ನೋವು ತರುವ ವಿಚಾರ ಎಂದರು.

ಸುದ್ದಿಗೋಷ್ಠಿಯಲ್ಲಿ ಮೋಹನ್ ಕೋಟ್ಯಾನ್, ಉಮೇಶ್ ದಂಡಕೇರಿ, ವಸಂತ ಬರ್ನಾಡ್, ಮನ್ಸೂರ್ ಸಾಬ್, ಮಿರ್ಝಾ ಸಾಬ್, ಮಯ್ಯದಿ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.


Spread the love