
ಕೋರ್ಟ್ ನಲ್ಲಿ ಜಡ್ಜ್ ಎದುರು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ!
ಬೆಂಗಳೂರು: ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಆಕೆಯ ಸಂಗಡಿಗರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬುಧವಾರ ಬೆಂಗಳೂರಿನ 1 ನೇ ಎಪಿಎಂಸಿ ಕೋರ್ಟ್ ಗೆ ಹಾಜರು ಪಡಿಸಲಾಗಿದ್ದು, ಸೆ. 23 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಂಚನೆಯಲ್ಲಿ ಭಾಗಿಯಾದ ಆರೋಪಿಗಳಾದ ಶ್ರೀಕಾಂತ್, ಗಗನ್, ರಮೇಶ್, ಪ್ರಜ್ವಲ್, ಧನ್ ರಾಜ್ ಅವರನ್ನೂ 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೋರ್ಟ್ ನಲ್ಲಿ ಚೈತ್ರಾ, ಜಡ್ಜ್ ಎದುರು ಕಣ್ಣೀರು ಹಾಕಿ, ‘ನನಗೆ ಪೊಲೀಸರು ಕಿರಿಕಿರಿ ಮಾಡಿದ್ದಾರೆ’ ಎಂದು ಹೇಳಿರುವುದಾಗಿ ವರದಿಯಾಗಿದೆ. 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚೈತ್ರಾ ಕುಂದಾಪುರ ಹಾಗೂ ಅವಳ ಗ್ಯಾಂಗ್ ನ್ನು ಬೆಂಗಳೂರಿನಲ್ಲಿ 1ನೇ ಎಸಿಎಂಎಂ ಕೋರ್ಟ್ ನಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಿಗೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಉಡುಪಿಯಲ್ಲಿ ಪೊಲೀಸರು ನನ್ನನ್ನು ಹಿಡಿದು ಎಳೆದಾಡಿ ನೋವು ಮಾಡಿದ್ದಾರೆ ಎಂದು ಚೈತ್ರಾ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಈ ಬಗ್ಗೆ ಪೊಲೀಸರನ್ನು ವಿಚಾರಿಸಿದಾಗ ಆರೋಪಿ ಹೇಳುವ ರೀತಿ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಉಡುಪಿ ಠಾಣೆಯ ಎಸಿಪಿ ರೀನಾ ಸುವರ್ಣ ಹೇಳಿದ್ದಾರೆ. ಇನ್ನು ಬಂಧನದ ಬಗ್ಗೆ ಎಲ್ಲಾ ವಿಡಿಯೋ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಮೆಡಿಕಲ್ ರಿಪೋರ್ಟ್ ಕೂಡ ಮಾಡಿಸಲಾಗಿದೆ ಎಂದು ಎಸಿಪಿ ರೀನಾ ಸುವರ್ಣ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಚೈತ್ರಾ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವಳು. ಬಡ ಕುಟುಂಬದಲ್ಲಿ ಹುಟ್ಟಿದ ಇವಳ ತಂದೆ ತಾಯಿ ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಚೈತ್ರ ಕುಂದಾಪುರ ತನ್ನ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿಸಿ, ಬಳಿಕ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರಿನ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದ್ದಳು
ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿ
ಆರಂಭದಲ್ಲಿಯೇ ಎಬಿವಿಪಿ ಹುಡಗರ ಜೊತೆ ಗುರುತಿಸಿಕೊಂಡಿದ್ದ ಇವಳು ಪದವಿ ಶಿಕ್ಷಣ ಪಡೆಯುವ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಬಿವಿಪಿಯಲ್ಲಿ ತೊಡಗಿಕೊಳ್ಳುತ್ತಾಳೆ. ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ಎಬಿವಿಪಿಯಲ್ಲಿ ವಿವಿಧ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಾಳೆ.
ಕಾಲೇಜು ಮುಗಿದ ಬಳಿಕ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರ ಕುಂದಾಪುರ, ಎಬಿವಿಪಿಯಿಂದ ಹಿಂದೆ ಸರಿಯುತ್ತಾಳೆ. ನಾಲ್ಕೈದು ವರ್ಷಗಳ ಕಾಲ ಸ್ಥಳೀಯ ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡಿದ ಬಳಿಕ, ಮತ್ತೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಾಳೆ.
ನಂತರ ಈ ಚೈತ್ರ ಹಿಂದೂ ಸಂಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುತ್ತಾಳೆ. ರಾಷ್ಟ್ರೀಯತೆ, ಹಿಂದೂ ಧರ್ಮ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಭಾಷಣಕಾರ್ತಿಯಾಗಿ ತೊಡಗಿಕೊಂಡಿದ್ದಳು. ಬಳಿಕ ಮಾಡಿದ್ದೆ ಕೋಟಿ ಕೋಟಿ ಲೂಟಿಯ ಪ್ಲ್ಯಾನ್.
ತನ್ನ ಉಗ್ರ ಭಾಷಣದಿಂದ ಸಾಕಷ್ಟು ಜನರ ವಿರೋಧಕ್ಕೆ ಗುರಿಯಾಗಿದ್ದ ಚೈತ್ರ ಕುಂದಾಪುರ, ಕೋಟಿ ಕೋಟಿ ದೋಚುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ. ಪ್ರತಿ ಭಾರಿ ಇಂತಹ ವಿವಾದಗಳು ಪ್ರಕರಣಗಳು ನಡೆದಾಗ ತಪ್ಪಿಸಿಕೊಳ್ಳಲು ಏನೇನೋ ಕಾರಣ ಹೇಳುತ್ತಿದ್ದ ಚೈತ್ರ ಕುಂದಾಪುರ, ಈ ಬಾರಿ ಸಾಕ್ಷಿ ಸಮೇತ ಪೊಲೀಸರಿಗೆ ಲಾಕ್ ಆಗಿದ್ದಾಳೆ.
ಐಷಾರಾಮಿ ಜೀವನ
ವಂಚನೆ ಪ್ರಕರಣ ಬೆಳಕಿಗೆ ಬರುವ ಮುನ್ನ ಚೈತ್ರಾ ದುಬಾರಿ ಬೆಲೆಯ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದುದು ಬಯಲಾಗಿದೆ.
ವಿಧಾನಸಭಾ ಚುನಾವಣೆ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿರುವುದಾಗಿ ಚೈತ್ರಾ ಸಹಿತ 8 ಮಂದಿಯ ವಿರುದ್ಧ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.