ಕೋವಿಡ್‌ನಿಂದ ಮೃತಪಟ್ಟವರಿಗೆ ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ!

Spread the love

ಕೋವಿಡ್‌ನಿಂದ ಮೃತಪಟ್ಟವರಿಗೆ ಡಿಸಿಸಿ ಬ್ಯಾಂಕ್‌ ಸಾಲ ಮನ್ನಾ!

ಮೈಸೂರು: ಜಿಲ್ಲಾ ಸಹಕಾರ ಬ್ಯಾಂಕ್ ಗಳ ಮೂಲಕ ಸಾಲ ಪಡೆದವರ ಕುಟುಂಬದವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರೆ, ಅಂಥವರ ಸಾಲ ಮನ್ನಾ ಮಾಡುವ ಚಿಂತನೆಯನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು. ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ಗಳಿಂದ ಸಾಲ ಪಡೆದಿರುವವರು ಕೋವಿಡ್ ನಿಂದ ಮೃತಪಟ್ಟಿದ್ದರೆ ಅಂಥವರ ಪಟ್ಟಿ ಹಾಗೂ ಸಾಲ ವಿವರವನ್ನು ಕೊಡುವಂತೆ ಈಗಾಗಲೇ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಎಂಡಿಗಳಿಗೆ ನಾನು ಸೂಚನೆಯನ್ನು ನೀಡಿದ್ದೇನೆ. ಶೀಘ್ರದಲ್ಲಿಯೇ ವಿವರಗಳನ್ನು ಪಡೆದು ಕಾರ್ಯಕ್ರಮವನ್ನು ಆಯೋಜಿಸಿ ಸಾಲಮನ್ನಾವನ್ನು ಘೋಷಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 30 ಲಕ್ಷ ರೈತರಿಗೆ 20810 ಕೋಟಿ ರೂಪಾಯಿ ಬೆಳೆ ಸಾಲ ನೀಡುವಂತೆ ಮುಖ್ಯಮಂತ್ರಿಗಳು ಗುರಿಯನ್ನು ನಿಗದಿಪಡಿಸಿದ್ದು, ಕಳೆದ ವರ್ಷದಂತೆ ಶೇಕಡಾ 100ರ ಗುರಿಯನ್ನು ಮೀರಿ ಸಾಲ ವಿತರಣೆ ಮಾಡಬೇಕೆಂಬ ಸೂಚನೆ ನೀಡಿದ್ದಾಗಿ ತಿಳಿಸಿದರು.

ಕಳೆದ ವರ್ಷ ಸಾಲ ನೀಡಿಕೆ ಗುರಿಯನ್ನು ಮೀರಿ ಹೇಗೆ ಶೇ. 114ರಷ್ಟು ಬೆಳೆಸಾಲವನ್ನು ನೀಡಲಾಗಿದೆಯೋ ಹಾಗೆಯೇ ಈ ಬಾರಿಯೂ ಸಹಕಾರ ಇಲಾಖೆ ಸಾಧನೆ ಮಾಡಲಿ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದರಂತೆ ಈಚೆಗೆ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ವಿಭಾಗದ ಡಿಸಿಸಿ ಬ್ಯಾಂಕ್ ವತಿಯಿಂದ ಕಾರ್ಯಕ್ರಮ ನಡೆಸಿ, ಪ್ರಸಕ್ತ ಸಾಲಿನ ಸಾಲ ನೀಡಿಕೆ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆಯನ್ನು ನೀಡಿದ್ದಾರೆ. ಮೈಸೂರಿನಲ್ಲಿ ಈಗ 2ನೇ ಹಂತದ ಕಾರ್ಯಕ್ರಮಕ್ಕೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಕಳೆದ ವರ್ಷ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆಸಾಲವನ್ನು ವಿತರಣೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ನಿಟ್ಟಿನಲ್ಲಿ 21 ಡಿಸಿಸಿ ಬ್ಯಾಂಕ್ ಗಳು ಉತ್ತಮ ಸಾಧನೆ ಮಾಡಿದ್ದು, 17,108 ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡುವ ಮೂಲಕ ಶೇ. 114 ಸಾಧನೆ ಮಾಡಿದೆ ಎಂದು ಸಚಿವರು ತಿಳಿಸಿದರು. ಕೋವಿಡ್ ಸಂದರ್ಭ ಸಹಿತ ಲಾಕ್ಡೌನ್ ಇದ್ದರೂ ಸಹ ಸಾಲ ಪಡೆದವರು ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಕಳೆದ ವರ್ಷ ಶೇಕಡಾ 95ರಷ್ಟು ಸಾಲದ ಮರುಪಾವತಿಯಾಗಿದೆ. ರೈತರು ತಮ್ಮ ಪ್ರಾಮಾಣಿಕತನವನ್ನು ಉಳಿಸಿಕೊಂಡಿದ್ದಾರೆಂದು ಸಚಿವರು ಶ್ಲಾಘಿಸಿದರು.

ಚಾಮರಾಜನಗರ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ ಅವರು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಡಿಸಿಸಿ ಬ್ಯಾಂಕ್ ಅನ್ನು ಲಾಭದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹೀಗೆ ಮುಂದುವರಿಸಿಕೊಂಡು ಹೋಗಬೇಕೆಂದು ಸಚಿವರು ಸಲಹೆ ಮಾಡಿದರು.

ಚಾಮರಾಜನಗರ, ಮೈಸೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಗೌಡ, ಮಿಲ್ಕ್ ಯೂನಿಯನ್ ಅಧ್ಯಕ್ಷರಾದ ಪ್ರಸನ್ನ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love