ಕೋವಿಡ್‌ ಭೀತಿಯ ನಡುವೆ ಉಡುಪಿಯಲ್ಲಿ ಸಂಭ್ರಮದ ಮೂರು ತೇರು ಉತ್ಸವ

Spread the love

ಕೋವಿಡ್‌ ಭೀತಿಯ ನಡುವೆ ಉಡುಪಿಯಲ್ಲಿ ಸಂಭ್ರಮದ ಮೂರು ತೇರು ಉತ್ಸವ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಸಪ್ತೋತ್ಸವದ ಆರನೇ ದಿನವಾದ ಶುಕ್ರವಾರ ರಾತ್ರಿ ಮಕರ ಸಂಕ್ರಾತಿಯ ಅಂಗವಾಗಿ ಪರ್ಯಾಯ ಅದಮಾರು ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು

ಸಂಜೆ ಶ್ರೀ ಕೃಷ್ಣ ಮುಖ್ಯಪ್ರಾಣರ ಮೂರ್ತಿಗಳನ್ನು ಸುವರ್ಣ ಪಲ್ಲಕ್ಕಿಯಲ್ಲಿ ಗರ್ಭಗುಡಿಯಿಂದ ಹೊರತಂದು ರಂಗುರಂಗಿನ ವಿದ್ಯುದ್ಧೀಪಗಳಿಂದ ಅಲಂಕೃತ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಯಿತು. ಬಳಿಕ ಬ್ರಹ್ಮರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಗರುಡ ರಥದಲ್ಲಿ ಮುಖ್ಯಪ್ರಾಣನನ್ನು ಹಾಗೂ ಮಹಾಪೂಜಾ ರಥದಲ್ಲಿ ಶ್ರೀ ಅನಂತೇಶ್ವರ ಹಾಗೂ ಚಂದ್ರಮೌಳ್ವೀಶ್ವರ ಮೂರ್ತಿಯನ್ನಿರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು.

ಭಕ್ತರಿಂದ ಎಳೆಯಲ್ಪಟ್ಟ ಮೂರು ರಥಗಳು ರಥಬೀದಿಯ ದಕ್ಷಿಣ ಭಾಗದಲ್ಲಿ ಒಂದೇ ರೇಖೆಯಲ್ಲಿ ನಿಂತಾಗ ಹಲವಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಯಘೋಷ ಮಾಡಿದರು, ರಥಗಳ ಮುಂದೆ ವರ್ಣವೈವಿಧ್ಯ ಅತ್ಯಾಕರ್ಷಕ ಸುಡುಮದ್ದುಗಳನ್ನು ಸಿಡಿಸಿ ಆಕಾಶದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಲಾಯಿತು.

ಆಚಾರ್ಯ ಮಧ್ವರು 13 ನೇ ಶತಮಾನದಲ್ಲಿ ಮಕರ ಸಂಕ್ರಾಂತಿಯಿಂದ ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ ನೆನಪಿಗಾಗಿ ವಾರ್ಷಿಕ ಜಾತ್ರೆಯನ್ನು ಆಚರಿಸಲಾಗುತ್ತದೆ. ಶನಿವಾರ ಬೆಳಿಗ್ಗೆ ಹಗಲು ರಥೋತ್ಸವ, ಚೂರ್ಣೋತ್ಸವದೊಂದಿಗೆ ಒಂದು ವಾರದ ಸಪ್ತೋತ್ಸವ ಮುಕ್ತಾಯಗೊಳ್ಳಲಿದೆ.

ಸರಕಾರದ ಕೋವಿಡ್‌ ನಿಯಮಾವಳಿಗಳಿದ್ದರೂ ಕೂಡ ಮೂರು ತೇರು ಉತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು.

Click Here To View More Photos


Spread the love

Leave a Reply