ಕೋವಿಡ್ ಅಡೆತಡೆಗಳ ನಡುವೆಯೂ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಷ

Spread the love

ಕೋವಿಡ್ ಅಡೆತಡೆಗಳ ನಡುವೆಯೂ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಷ

  • ಕಣ್ಮನ ಸೆಳೆಯುತ್ತಿದೆ ವಿವಿಧ ಬಗೆಯ ವಿನಾಯಕನ ಮೂರ್ತಿಗಳು
  • ಕೋವಿಡ್ ಆತಂಕದ ನಡುವೆಯೂ ಗಣೇಶನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ ತರಹೇವಾರಿ ಮೂರ್ತಿಗಳ ರಚನೆಯಲ್ಲಿ ಮಗ್ನರಾದ ಕಲಾವಿದರು

ಕುಂದಾಪುರ: ನಾಡಿನೆಲ್ಲೆಡೆ ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭಗೊಂಡಿದೆ. ಕೋವಿಡ್ ಕಾರಣದಿಂದಾಗಿ ಗಣೇಶ ಚತುರ್ಥಿಗೆ ಸರ್ಕಾರ ಅನುಮತಿ ಕೊಡುತ್ತದೆಯೊ ಇಲ್ಲವೋ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ನಡುವೆ ಪರಿಸರಸ್ನೇಹಿ ಗಣಪತಿ ಮೂರ್ತಿ ತಯಾರಕರು ತಾವು ತಯಾರಿಸಿದ ತರಹೇವಾರಿ ಗಣೇಶನ ಮೂರ್ತಿಗಳಿಗೆ ಅಂತಿಮ ಸ್ಪರ್ಷಗಳನ್ನು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಡೊಳ್ಳು ಹೊಟ್ಟೆ, ನೀಳವಾದ ಸೋಂಡಿಲು, ಮೋದಕ, ಮೂಷಿಕನ ಮೇಲೆ ಕೂತ ವಿನಾಯಕ, ಹೀಗೆ ಹತ್ತು ಹಲವು ಭಂಗಿಯಲ್ಲಿನ ವಿಘ್ನ ವಿನಾಶಕನ ಮೂರ್ತಿ ತಯಾರಿಕೆಯಲ್ಲಿ ಕಲಾವಿದರು ಬ್ಯೂಸಿಯಾಗಿದ್ದಾರೆ. ಹೌದು ನಾಡಿನೆಲ್ಲಡೆ ಭಕ್ತಿ ಭಾವದಿಂದ ಆಚರಿಸಲ್ಪಡುವ ಗಣೇಶ ಚತುರ್ಥಿಯ ತಯಾರಿ ಬಲು ಜೋರಾಗಿ ನಡೆಯುತ್ತಿದೆ. ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವೇ ದಿನಗಳಿದ್ದರೂ, ಹಿಂದಿನ ವರ್ಷಗಳಲ್ಲಿದ್ದ ಚೌತಿಯ ಸಂಭ್ರಮ ಈ ವರ್ಷ ಅದೇಕೋ ಕಾಣುತ್ತಿಲ್ಲ. ಕೋವಿಡ್ ಮಹಾಮಾರಿ ಭಯದಿಂದಾಗಿ ಈ ಬಾರಿ ಸಾರ್ವಜನಿಕ ಚೌತಿ ಹಬ್ಬದ ಆಚರಣೆ ಸ್ವಲ್ಪ ಮಟ್ಟಿಗೆ ಕಳೆಗುಂದಿದೆ. ಆದರೆ ತಾಲೂಕಿನಲ್ಲಿ ವಿನಾಯಕನ ವಿಗ್ರಹ ತಯಾರಿಕೆಗೆ ಈ ಬಾರಿ ಹೆಚ್ಚಿನ ಬೇಡಿಕೆ ಸಿಕ್ಕಿದೆ. ವಿಗ್ರಹಕಾರರೇ ಹೇಳುವಂತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಒಂದೆರಡು ಅಧಿಕ ಮೂರ್ತಿಗಳು ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಪ್ರತಿ ವರ್ಷ ನಾಗರ ಪಂಚಮಿಯಿಂದ ವಿಗ್ರಹ ರಚನೆಕಾರರು ಭಕ್ತರ ಅಭಿರುಚಿಗೆ ತಕ್ಕಂತೆ ನವನವೀನ ವಿನ್ಯಾಸದ, ಪರಿಸರ ಸ್ನೇಹಿ ವಿನಾಯಕನ ವಿಗ್ರಹಗಳ ರಚನೆಯನ್ನು ಆರಂಭಿಸುತ್ತಾರೆ. ವಿವಧೆಡೆಗಳಲ್ಲಿ ಆಚರಿಸುವ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಪಂಚಮಿಯ ದಿನ ವಿಳ್ಯ ಕೊಡುವುದು ಸಂಪ್ರದಾಯ. ತೆಂಗಿನ ಕಾಯಿ, ಅಕ್ಕಿ, ಕಾಣಿಕೆ ಹಾಗೂ ಗಣಪತಿ ಪೀಠವನ್ನು ನೀಡಿ ಮೂರ್ತಿ ನಿರ್ಮಿಸುವ ಕೊಡುವ ಬಗ್ಗೆ ಹೇಳುತ್ತಾರೆ. ಪಂಚಮಿಯಿದ ಮೂರ್ತಿ ತಯಾರಿಕೆಯ ಕೆಲಸದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಪ್ರಮಾಣಕ್ಕೆ ತಕ್ಕಂತೆ ಮೂರ್ತಿ ರಚನೆಗೊಳ್ಳುತ್ತದೆ.

ಕುಂದಾಪುರದ ವಸಂತ ಗುಡಿಗಾರ್ ಅವರು ಕಳೆದ 40 ವರ್ಷಗಳಿಂದ ಹಳೆ ಬಸ್‍ಸ್ಟ್ಯಾಂಡ್‍ನ ಕರ್ನಾಟಕ ಬ್ಯಾಂಕ್ ಸಮೀಪದ ವರ್ಕ್‍ಶಾಪ್‍ನಲ್ಲಿ ಗಣಪನ ವಿಗ್ರಹ ತಯಾರಿಸುತ್ತಿದ್ದಾರೆ. ಪ್ರತಿ ವರ್ಷ 70 ಕ್ಕೂ ಅಧಿಕ ಪರಿಸರಸ್ನೇಹಿ ಗಣಪತಿ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಆದರೆ ಈ ಬಾರಿ ಈವರೆಗೆ ಸುಮಾರು 73 ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಅದರಲ್ಲಿ ಹೆಚ್ಚಿನವು ಮನೆಗಳಲ್ಲಿ ಆಚರಿಸುವುದಾಗಿದೆ. ಮಹಾಂಕಾಳಿ, ಕುಂದೇಶ್ವರ, ರಾಮಮಂದಿರ, ಹೆಮ್ಮಾಡಿ ಸೇರಿದಂತೆ ಹೀಗೆ 7-8 ದೇವಸ್ಥಾನಗಳಿಗೆ ಮೂರ್ತಿ ತಯಾರಿಸುವ ವಸಂತ್ ಗುಡಿಗಾರ್ ಮೂರ್ತಿ ತಯಾರಿಕೆಯಲ್ಲಿ ಪ್ರವೀಣರು. ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಮೂರ್ತಿ ತಯಾರಿಕೆಯನ್ನು ಕರಗತ ಮಾಡಿಕೊಂಡಿರುವ ಇವರು ಶಿಲ್ಪ ಕಲೆಯನ್ನೂ ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಚೌತಿಯ ಬಳಿಕ ಮರ ಹಾಗೂ ಕಲ್ಲಿನ ಶಿಲ್ಪಗಳ ಕೆತ್ತನೆಯ ಕೆಲಸವನ್ನು ಮಾಡುತ್ತಾರೆ. ವಸಂತ್ ಗುಡಿಗಾರ್ ಅವರ ಪುತ್ರ ಕಾಲೇಜು ವ್ಯಾಸಂಗ ಮಾಡುತ್ತಿರುವ ವೈಭವ್ ಗುಡಿಗಾರ್ ಕೂಡ ತಂದೆಯ ಮೂರ್ತಿ ತಯಾರಿಕೆಯ ಕೆಲಸಕ್ಕೆ ಸಾಥ್ ನೀಡುತ್ತಾರೆ. ಹುಣ್ಸೆಮಕ್ಕಿ ಸಮೀಪದ ಚಂದ್ರಶೇಖರ್ ನಾಯಕ್ ಅವರು ಕಳೆದ 25 ವರ್ಷಗಳಿಂದ ತಮ್ಮ ಮನೆಯಲ್ಲಿಯೇ ವಿಗ್ರಹ ತಯಾರಿಸಿ ವಿವಿಧೆಡೆಯ ಸಾರ್ವಜನಿಕ ಗಣೇಶೋತ್ಸವ, ಮನೆಗಳಲ್ಲಿ ನಡೆಯುವ ಚೌತಿ ಆಚರಣೆಗೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಮುಂಬೈನ ಕಂಪೆನಿಯೊಂದರಲ್ಲಿ 30 ವರ್ಷಗಳ ಹಿಂದೆ ಕೆಲಸಕ್ಕಿದ್ದ ವೇಳೆಯಲ್ಲಿ ಅಲ್ಲೇ ಸಮೀಪದಲ್ಲಿದ್ದ ಕಾರ್ಖಾನೆಯೊಂದರಲ್ಲಿ ಗಣೇಶನ ವಿಗ್ರಹ ತಯಾರು ಮಾಡುವಲ್ಲಿಗೆ ಬಿಡುವಿದ್ದಾಗ ಹೋಗುತ್ತಿದ್ದ ಚಂದ್ರಶೇಖರ್ ಅವರು ಆಸಕ್ತಿಯಿಂದ ನೋಡಿ ಕೆಲವು ದಿನಗಳಲ್ಲಿಯೇ ವಿಗ್ರಹ ರಚನೆಯನ್ನು ಕರಗತ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಇವರು ಕಾರು ಚಾಲಕರಾಗಿದ್ದು, ಮಣ್ಣಿನ ಮೂರ್ತಿ ತಯಾರಿಕೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಚೌತಿ ಹಬ್ಬ ಬಂತೆಂದರೆ 2-3 ತಿಂಗಳು ಗಣಪತಿ ವಿಗ್ರಹ ರಚನೆ ಮಾಡುವುದರಲ್ಲಿ ತೊಡಗಿಸಿಕೊಳ್ಳುವ ಚಂದ್ರಶೇಖರ್ ಇದರೊಂದಿಗೆ ಶಾರದೆಯ ಮೂರ್ತಿಗಳನ್ನು ತಯಾರಿಸುತ್ತಾರೆ.

ಹೀಗೆಯೇ ತಾಲೂಕಿನ ಐದಾರು ಕಡೆಗಳಲ್ಲಿ ಕಲಾವಿದರು ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಾರೆ. 12 ಇಂಚಿನಿಂದ ಆರಂಭಗೊಂಡು 5 ಅಡಿಯಷ್ಟು ಬೃಹತ್ ಮೂರ್ತಿಗಳನ್ನು ಗ್ರಾಹಕರ ಬೇಡಿಕೆಗಳಿಗನುಸಾರವಾಗಿ ವಿಭಿನ್ನ ವಿನ್ಯಾಸದಲ್ಲಿ ಮೂರ್ತಿಗಳನ್ನು ರಚನೆ ಮಾಡಿಕೊಡುತ್ತಾರೆ. ವಸಂತ್ ಗುಡಿಗಾರ್ ಅವರ ವರ್ಕ್‍ಶಾಪ್‍ನಲ್ಲಿ ಈ ಬಾರಿ ಕುಂಭಾಶಿಯ ಹರಿಹರ ದೇವಸ್ಥಾನವೂ ಸೇರಿದಂತೆ ಮೂರು ಕಡೆಗಳಿಗೆ ಬಣ್ಣ ರಹಿತ ಗಣಪತಿ ಮೂರ್ತಿಯ ಬೇಡಿಕೆ ಬಂದಿದೆ. ತಿಂಗಳುಗಳ ಹಿಂದೆಯೇ ಬೇಡಿಕೆಗನುಸಾರವಾಗಿ ನಿರ್ಮಾಣಗೊಳ್ಳುವ ಮೂರ್ತಿಗಳಿಗೆ ಹಬ್ಬಕ್ಕೆ ಮೂರ್ನಾಲ್ಕು ದಿನಗಳ ಮೊದಲೇ ಬಣ್ಣ ನೀಡುವ ಕಾಯಕದಲ್ಲಿ ಕಲಾವಿದರು ತೊಡಗಿಕೊಳ್ಳುತ್ತಾರೆ. ಗಣೇಶ ಚತುರ್ಥಿಯ ದಿನ ಮೂರ್ತಿಗಳಿಗೆ ಕಲೆ ಕೊಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಗ್ರಾಹಕರಿಗೆ ನೀಡುತ್ತಾರೆ.

Pics By Rajesh Hemmady 


Spread the love